"ಅಪ್ಪಾ.. ನಮ್ಮ ತಲೆಮೇಲೆ ಎರಡು ಕಾಳು ಅಕ್ಷತೆ ಇಟ್ಟು ಮನದುಂಬಿ ಆಶೀರ್ವದಿಸಿ ಬಿಡು. ಅಷ್ಟೆ ಸಾಕು. ಅದನ್ನೇ ನೀನು ನನಗಾಗಿ ಧಾರೆಯಿತ್ತ ಸರ್ವಸ್ವ ಅಂತ ಭಾವಿಸಿ ಜೀವನ ಪರ್ಯಂತ ಸುಖಿಯಾಗಿರುತ್ತೇನೆ...''. ಮಗಳು ಪ್ರೀತಿ ತಾನು ಪ್ರೇಮಿಸಿ ಕದ್ದು ಮುಚ್ಚಿ ಮದುವೆಯಾದ ಆಕಾಶ್ ನೊಂದಿಗೆ ಮನೆಯೆದುರು ಗೋಗರೆಯುತ್ತಿದ್ದಳು. ಆದರೆ ತಂದೆ ರಾಜೀವ ತನ್ನ ಕಠಿಣ ನಿಲುವನ್ನು ಇನ್ನೂ ಬಿಗಿಗೊಳಿಸಿ, ''ನೀನು ನನ್ನ ಮಗಳೇ ಅಲ್ಲ !. ನಿನ್ನಮ್ಮ ಯಾವುದೋ ವಿಷ ಜನ್ತುವನ್ನ ಹಡೆದಿದ್ದಾಳೆ ಅಂತ ಭಾವಿಸಿ ಅಂದೇ ಎಲ್ಲಾ ಸಂಬಂಧಗಳನ್ನು ಮರೆತಾಗಿದೆ. ಇನ್ನೊಂದು ಕ್ಷಣ ನೀನು ನನ್ನೆದುರು ನೀನಿದ್ದರೂ ನಾನು ನಾನಗಿರೋಲ್ಲ...!'' ಎಂದು ಘರ್ಜಿಸಿದ. ಪ್ರೀತಿಯ ಪಕ್ಕದಲ್ಲೇ ನಿಂತಿದ್ದ ಆಕಾಶ್, ''ಆಗಿದ್ದೆಲ್ಲ ಒಂದು ಕೆಟ್ಟ ಕನಸು ಅಂತ ಮರೆತು ಬಿಡಿ ಮಾವಯ್ಯಾ... ನಿಮ್ಮ ಪ್ರಕಾರ ನಮ್ಮಿಂದ ತಪ್ಪು ಆಗಿದ್ದರೆ ಅದಕ್ಕೆ ಕ್ಷಮೆ ಬೇಡಲಾದ್ರು ಅವಕಾಶ ನೀಡಿ. ನಾನು ಇವಳನ್ನ ಯಾವುದೇ ಕೊರತೆ ಇಲ್ಲದ ಹಾಗೆ ಬಾಳಿಸ್ತಿನಿ...'' ಎಂದಾಗ ರಾಜೀವ, ''ಏನಂದೆ..? ಯಾವನೋ ಮಾವಯ್ಯ ನಿನಗೆ...?! ಇನ್ನೊಂದ್ಸಲ ಹಾಗೆ ಕರೆದರೆ ಪರಿಣಾಮ ನೆಟ್ಟಗಿರೋಲ್ಲ... ಮಾವಯ್ಯ ಅಂತೆ ಮಾವಯ್ಯ..!'' ಎಂದು ಕಿರುಚಾಡಿದ.
ಆಕಾಶ್ ಓರ್ವ ಶ್ರೀಮಂತ, ಸ್ಫುರದ್ರೂಪಿ ಯುವಕ. ಪ್ರತಿಷ್ಟಿತ ಬ್ಯುಸಿನೆಸ್ಸ್ ಮ್ಯಾನೇಜ್ಮೆಂಟ್ ಕಾಲೇಜ್ ನಲ್ಲಿ ಎಂ ಬಿ ಎ ವ್ಯಾಸಂಗ ಮಾಡಿದ್ದಾನೆ. ಊರಿನಲ್ಲಿ ತಂದೆ ಗಳಿಸಿದ ಆಸ್ತಿಯೂ ಸಾಕಷ್ಟಿದೆ. ಅದು ಸಾಲದು ಎಂಬಂತೆ, ನಗರದಲ್ಲಿ ಎರಡು ಕಡೆ ಬೇರೆ ಬೇರೆ ಉದ್ಯಮಗಳು... ತನ್ನ ಬುದ್ಧಿವಂತಿಕೆಯಿಂದ ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾನೆ. ಇವನ ಚಾಕಚಕ್ಯತೆ ಕಂಡು ಮಹಾನ್ ಎನಿಸಿಕೊಂಡ ಉದ್ದಿಮೆದಾರರೂ ಅಸೂಯೆ ಪಟ್ಟಿದುಂಟು. ಆಕಾಶ್ ಮತ್ತು ಪ್ರೀತಿ ಕಳೆದ ಒಂದು ವರ್ಷದಿಂದ ಗಾಢವಾಗಿ ಪ್ರೇಮಿಸುತ್ತಿದ್ದವರು. ಈ ವಿಚಾರ ತಿಳಿಯದೆ ರಾಜೀವ, ನಾಲ್ಕು ತಿಂಗಳಿಂದ ಬಿಎಸ್ಸಿ ಓದಿರುವ ಮಗಳಿಗೆ ಮದುವೆ ಮಾಡಿಸಲು ಜೋರಾಗಿ ಓಡಾಡುತ್ತಿದ್ದ. ಅದು ಇದು ಎಂದು ಹೇಳಿ ಬಂದ ಹುಡುಗರನ್ನ ಪ್ರೀತಿ ತಿರಸ್ಕರಿಸಿದ್ದಾಯಿತು. ಅಲ್ಲದೆ ಆಕಾಶ್ ಜೊತೆ ವಿಚಾರ ಮಂಡಿಸಿದಳು. ತಮ್ಮಿಬ್ಬರ ಪ್ರಣಯದ ಕುರಿತು ಮನೆಯಲ್ಲಿ ಹೇಳು ಎಂದರೆ ಪ್ರೀತಿ ಕೋಪಿಷ್ಠ ತಂದೆಯ ಬಗ್ಗೆ ವರ್ಣನೆ ಮಾಡಿದಳು...! ಹೋಗಲಿ, ತಾನೆ ಮಾತಾಡುವುದಾಗಿ ಹೇಳಿದರೆ ಪ್ರೀತಿಯಿಂದ ಆತ್ಮಹತ್ಯೆಯ ಬೆದರಿಕೆ... ಇದೊಳ್ಳೆ ಕಥೆಯಾಯಿತಲ್ಲ ಎಂದುಕೊಂಡ ಆಕಾಶ್, ಕೊನೆಗೆ ಎರಡು ದಿನಗಳ ಹಿಂದೆ ಘಾಟಿ ಸುಬ್ರಮಣ್ಯನ ಮುಂದೆ ಪ್ರೀತಿಗೆ ತಾಳಿ ಕಟ್ಟಿದ. ಕಾಣೆಯಾದ ಮಗಳನ್ನು ಹುಡುಕಿ ರಾಜೀವ ಹೈರಾಣಾಗಿದ್ದ. ಪೊಲೀಸರಿಗೆ ದೂರು ನೀಡಿದ್ದು ಆಯ್ತು. ಇಂದು ಮಗಳನ್ನ ಈ ರೂಪದಲ್ಲಿ ನೋಡಿದ್ದ ರಾಜೀವನ ಬಿಪಿ ಸಹಜವಾಗೇ ನೆತ್ತಿಗೇರಿತ್ತು. ಆಕಾಶ್ ಮತ್ತು ಪ್ರೀತಿ ರಾಜೀವನನ್ನು 'ಕ್ಷಮಿಸಿ' ಎಂದು ಪರಿ ಪರಿಯಾಗಿ ಬೇಡಿಕೊಂಡರು. ಆದರೆ, ಯಾವ ರಾಜಿಗೂ ಮಣಿಯದ ರಾಜೀವ, 'ಪ್ರೀತಿ ತನ್ನ ಮಗಳೇ ಅಲ್ಲ. ಇನ್ನು ಮುಂದೆ ತನಗೂ ಅವಳಿಗೂ ಯಾವುದೇ ಸಂಬಂಧವಿಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿದ. ಇಷ್ಟು ಹೊತ್ತು ಸಂಯಮದಿಂದ ವರ್ತಿಸಿದ್ದ ಆಕಾಶ್, ತಾಳ್ಮೆ ಕಳೆದುಕೊಂಡ. ಪ್ರೀತಿಯ ಕೈ ಹಿಡಿದು, ''ನಡಿಯೇ ಪ್ರೀತಿ, ನಾವೇನೋ ತಪ್ಪು ಮಾಡಿದ್ದೇವೆ ನಿಜ. ಅದನ್ನ ಒಪ್ಪಿಕೊಂಡು ಕ್ಸಮಿಸಿ ಎಂದು ಕೇಳಲು ಇವರ ಬಳಿಗೆ ಬಂದದ್ದೆ ತಪ್ಪಾಯ್ತು.! ಇವರ ಹಠ ಇವರಿಗೆ. ನಮ್ಮ ಹಠ ನಮಗೆ...!'' ಎಂದ. ''ಆಕಾಶ್...'' ಎಂದ ಪ್ರೀತಿಯ ಮಾತನ್ನು ಅರ್ಧಕ್ಕೇ ನಿಲ್ಲಿಸಿದ ಆಕಾಶ್, ''ಅಲ್ವೇ ಸಂಬಂಧವೇ ಇಲ್ಲ ಅಂತ ಹೇಳಿದ ಮೇಲೆ ಎಂಥ ಮಾತು...?! ಮುಂದೆ ಬಾಳಬೇಕಾದವರು ನಾವೇ ಹೊರತು ಅವರಲ್ಲ..'' ಎನ್ನುತ್ತಾ ಕಾರಿನ ಬಳಿ ಕರೆದೊಯ್ದ. ರಾಜೀವ ಹೇಳಿದಂತೆ ಮಾಡಿ ತೋರಿಸುವವನೆಂದು ಪ್ರೀತಿಗೆ ಚೆನ್ನಾಗಿ ತಿಳಿದಿದೆ. ಅದರ ಅನುಭವ ಈ ಮೊದಲು ಸಾಕಷ್ಟು ಬಾರಿ ಆಗಿದೆ. ಈಗ 'ಸಂಬಂಧವೇ ಇಲ್ಲ' ಎಂದಾಗಲಂತೂ ಆಕಾಶ್ನನ್ನೇ ತೊರೆದು ಅಪ್ಪನ ಪಾದಗಳಲ್ಲಿ ಬಿದ್ದು 'ಕ್ಷಮಿಸು' ಎಂದು ಕೇಳಬೇಕು ಎನಿಸುತ್ತಿದೆ. ಇದಕ್ಕೂ ಮೊದಲು ಅದೆಷ್ಟು ಸಲ ಅಪ್ಪ ನನ್ನನ್ನು ಕ್ಷಮಿಸಿಲ್ಲ..! ಕ್ಷಣಗಾಲ ಕೋಪಿಸಿಕೊಂಡ ಅಪ್ಪ ನಂತರ ನಾನು ಕೇಳಿದ್ದನ್ನು ಕೊಡಿಸಿದ ದಿನಗಳು ಅವೆಷ್ಟೋ..! ಆದರೆ, ಇದು ಹುಡುಗಾಟದ ವಿಚಾರವಲ್ಲ. ಜೀವನದ ಪ್ರಶ್ನೆ. ತನಗೆ ಆಕಾಶ್ ಅದಾಗಲೇ ದೇವರ ಮುಂದೆ ತಾಳಿ ಕಟ್ಟಿ ಜೀವನ ಪೂರ್ತಿ ಜೊತೆಯಾಗಿರುವುದಾಗಿ ಭಾಷೆ ನೀಡಿದ್ದಾನೆ. ಮನಸ್ಸಿನ ಈ ಎಲ್ಲಾ ಇರುಸು ಮುರುಸುಗಳನ್ನ ಅರಗಿಸಿಕೊಳ್ಳಲಾಗದೆ ಶಿಲೆಯಂತೆ ಕಾರಿನ ಬಳಿಯೇ ನಿಂತಿದ್ದಳು.
ಈ ಎಲ್ಲ ಘಟನೆಗಳ ಹಿನ್ನೆಲೆ ಅರಿತಿದ್ದ ಕೆಲಸದಾಕೆ ನಿಂಗವ್ವ ಮಧ್ಯ ಪ್ರವೇಶಿಸಿ, ''ಯಜಮಾನ್ರೆ...! ಎಷ್ಟಾರ ಚಿಕ್ಕಮ್ಮನೋರು ನಿಮ್ಮ ಮಗಳೆ ತಾನೆ... ನಿಮ್ಮ ಹಾದಿನೆ ಹಿಡ್ದವ್ರೆ...!!'' ಎಂದಳು. ಅವಳಾಡಿದ ಕೊನೆಯ ವಾಕ್ಯ ಅದ್ಯಾಕೋ ರಾಜೀವನ ಮನಸ್ಸಿಗೆ ಸೂಜಿ ಚುಚ್ಚಿದ ಅನುಭವ ನೀಡಿತು. ತನ್ನ ಬಾಯ್ತಪ್ಪಿ ಬಂದ ಮಾತಿನಿಂದ ನಿಂಗವ್ವ ಕೂಡ ತಬ್ಬಿಬ್ಬಾದಳು.
'ಹೌದು...! ಸುಮಾರು ೨೨ ವರ್ಷಗಳ ಹಿಂದಿನ ಕಥೆ. ಇಂದಿಗೂ ಆ ದಿನಾಂಕ ಚೆನ್ನಾಗಿ ನೆನಪಿದೆ. ೧೯೮೪, ಜನವರಿ ೨೮. ಆಕೆ ಸುಲೋಚನ!. ಅವಳೊಂದಿಗೆ ತನ್ನ ಮದುವೆಯೆಂದು ಅಪ್ಪಾಜಿ ನಿರ್ಧರಿಸಿದ್ದರು. ಆದರೆ, ಆ ಮದುವೆ ಇಷ್ಟವಿಲ್ಲದ ನಾನು, ನನ್ನ ಪ್ರಿಯತಮೆ ಶ್ರೀಮತಿಯು ಜನವರಿ ೨೪ರ ರಾತ್ರಿ ರಾಮ ಮಂದಿರದಲ್ಲಿ ಹಾರ ಬದಲಾಯಿಸಿ 'ಮದುವೆ'ಯಾಗಿ ಬಂದಿರಲಿಲ್ಲವೇ...?! ಅಪ್ಪಾಜಿಯವರ ಕೈಯಿಂದ ಎಷ್ಟು ಹೊಡೆತ ಬೀಳುವುದೋ, ಅಥವಾ ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಅಮ್ಮನಿಗೆ ಏನಾದರು ಹೆಚ್ಚು ಕಡಿಮೆಯಾದೀತು ಎಂಬ ಭಯದಿಂದ ಈ ವಿಚಾರವನ್ನು ಮುರು ದಿನಗಳ ಕಾಲ ಅದೆಷ್ಟು ಕಷ್ಟ ಪಟ್ಟು ಮುಚ್ಚಿಟ್ಟಿದ್ದೆ...! ನಂತರ ಮದುವೆಯ ಮುನ್ನಾ ದಿನವಾದ ೨೭ರ ರಾತ್ರಿ ಇದೇ ನಿಂಗವ್ವ ನ ಕೈಯಲ್ಲಿ ಒಂದು ಚೀಟಿಯಿತ್ತು, ನನ್ನ ಪರವಾಗಿರುತ್ತಿದ್ದ ಅಣ್ಣನಿಗೆ ಕೊಡುವಂತೆ ಮತ್ತು ಆ ರೀತಿಯಲ್ಲಿ ಅಪ್ಪಾಜಿಗೆ ವಿಷಯ ತಿಳಿಸುವಂತೆ ಮಾಡಿರಲಿಲ್ಲವೇ..?! ಆ ನಂತರ ಸುಲೋಚನ ನ ಕಡೆಯವರು ನಿರೀಕ್ಷೆಗೂ ಮೀರಿ ಗಲಾಟೆ ಮಾಡಿದ್ದು, ನನಗೂ ಅಪ್ಪಾಜಿಗೂ ಛೀಮಾರಿ ಹಾಕಿದ್ದು... ಎಲ್ಲ ಈಗ ಇತಿಹಾಸ..! ಆ ಅನಿರೀಕ್ಷಿತ ಘಟನೆಯಿಂದ ಕುಪಿತಗೊಂಡ ಅಪ್ಪಾಜಿ ಇದೇ ರೀತಿ ನಮ್ಮನ್ನೂ ಮನೆಯಿಂದ ಹೊರಹಾಕಿದ್ದರು. ಆದರೆ, ಪರಿಪರಿಯಾಗಿ ಬೇಡಿಕೊಂಡಾಗ ನನ್ನನ್ನೂ, ಪ್ರಿಯತಮೆ ಶ್ರೀಮತಿಯನ್ನೂ ಮನೆಗೆ ಸೇರಿಸಿಕೊಂಡಿದ್ದರು. ಅದೊಂದು ಒಳ್ಳೆ ದಿನ, ಮುಹೂರ್ತ ನಿಶ್ಚಯ ಮಾಡಿ ಸೊಸೆಯನ್ನು ಮನೆ-ಮನ ತುಂಬಿಕೊಂಡಿದ್ದರು'. ಇದೆಲ್ಲವೂ ಒಂದೇ ಕ್ಷಣದಲ್ಲೇ ಮನಃಪಟಲದಲ್ಲಿ ಸುಳಿದು ಹೋಯಿತು.
'ನನ್ನ ಮತ್ತು ಶ್ರೀಮತಿಯ ಒಲವಿನ ಫಲವೇ ಈ ಮಗಳು. ಅದಕ್ಕೇ ಅವಳಿಗೆ 'ಪ್ರೀತಿ' ಎಂದು ನಾಮಕರಣ ಮಾಡಿದ್ದು. ಅದೂ ಅಪ್ಪಾಜಿಯವರ ಸಲಹೆಯಂತೆಯೇ..! ಆದರೆ, ದುರಾದೃಷ್ಟವಶಾತ್ ಪ್ರೀತಿ ಹದಿನೈದರ ಹರೆಯಕ್ಕೆ ಬಂದಾಗ ಅವಳ ತಾಯಿ ವಿಷ ಜಂತುವಿನ ಕಡಿತಕ್ಕೆ ಒಳಗಾಗಿ ನನ್ನಿಂದ ದೂರವಾದಳು'. ತನ್ನ ಬದುಕಿನ ವಿವಿಧ ಘಟನಾವಳಿಗಳನ್ನು ನೆನೆದು ರಾಜೀವನ ಕಣ್ಣಂಚು ಒದ್ದೆಯಾಗಿತ್ತು, ಮನಸ್ಸು ತಡೆಯಲಾರದಷ್ಟು ಭಾರವಾಗಿತ್ತು.
'ಇಲ್ಲ..! ತಾನು ದುಡುಕಿದೆ. ಆಡುವುದು ಒಂದು ಮಾಡುವುದು ಇನ್ನೊಂದು ಎಂದಾಗಬಾರದು. ಅವರನ್ನ ಈಗಲೇ ಮನೆಯೊಳಕ್ಕೆ ಸೇರಿಸಿಕೊಳ್ಳಬೇಕು. ಇಬ್ಬರನ್ನೂ ದೀರ್ಘ ಕಾಲ ಬಾಳುವಂತೆ ಆಶೀರ್ವದಿಸಬೇಕು. ಎಷ್ಟಾದರೂ ಅವಳು ನನ್ನ ಮಗಳು. ಅತ್ಯುತ್ತಮವಾದುದೆ ಅವಳ ಆಯ್ಕೆ ಆಗಿರುತ್ತದೆ.' ಎಂದುಕೊಂಡು, ''ಪ್ರೀತೀ...!'' ಎಂದು ಕೂಗುತ್ತಾ ಮನೆಯಿಂದ ಹೊರಗೋಡಿ ಬಂದ. ಆದರೆ, ಅವರ ಕಾರು ಅದಾಗಲೇ ಕಣ್ಣಳತೆಯಿಂದ ದೂರವಾಗಿತ್ತು. ಮಂಜಾದ ಕಣ್ಣನ್ನು ಒರೆಸಿಕೊಳ್ಳುತ್ತಾ, ಕಾರು ಹೋದ ದಿಕ್ಕಿನಲ್ಲೇ ತನ್ನೆರಡೂ ಕೈಗಳನ್ನು ಮೇಲೆತ್ತಿ ''ದೀರ್ಘ ಸುಮಂಗಲಿಯಾಗಿ ಬಾಳಮ್ಮಾ...!'' ಎಂದು ಮನದುಂಬಿ ರಾಜೀವ ಆಶೀರ್ವದಿಸಿದ.