ಇಲ್ಲೇ ಇದ್ದು ಬಿಡುವಾಸೆ.. ಇದೇ ಕ್ರಿಕೆಟ್ ಪಿಚ್‍ನಲ್ಲಿ ಚೆಂಡನ್ನು ಮತ್ತೊಮ್ಮೆ ಸಿಕ್ಸರ್, ಬೌಂಡರಿಗಳಿಗೆ ಅಟ್ಟುವ ಆಸೆ..
ಕಂಡೂ ಕಾಣದಂತಿರುವ ಗಿಡ, ಪೊದೆಗಳ ಜತೆ ಕಣ್ಣಾಮುಚ್ಚಾಲೆ ಆಡುವಾಸೆ.. ಆದರೆ..
ಎದುರು ಬಿಳಿಯ ಬಟ್ಟೆ.. ಅದರೊಳಗೆ ಯಾರೋ ಅಡಗಿ ಕುಳಿತು ಅವರ ಕರಿ ತಲೆ ಮಾತ್ರ ಕಂಡು ಗಾಳಿಯಲ್ಲಿ ಪಿಸುಮಾತು ತೇಲಿಬಂದಂತೆ..
ಕೈ ಗಡಿಯಾರದಲ್ಲಿ ಬೆಳಗಿನ ಒಂಬತ್ತು ಗಂಟೆ. ಇನ್ನೂ ಬಿಸಿಲಿನ ಸುಳಿವಿಲ್ಲ. ರಾತ್ರಿ ತಂಗಿದ್ದಕ್ಕೆ ಬಾಡಿಗೆ ನೀಡದೇ ಮನೆ ಖಾಲಿ ಮಾಡಲು ಬಿಡೆ ಎಂದು ಸೂರ್ಯ ಕಿರಣಕ್ಕೆ ಮಂಜು ಅಡ್ಡಗಟ್ಟಿದಂತೆ..!
20 ಅಡಿ ದೂರಕ್ಕೂ ದೃಷ್ಟಿ ಹರಿಯದಂತೆ ಸುರಿದ ಹಾಲ್ನೊರೆಯಂತೆ. ನಡುವೆಯೇ.. ಹಸಿರು ಗಿಡಗಳು ತೊಟ್ಟಿಕ್ಕುತ್ತಿವೆ. ಅದು ಅಳುವೋ.. ಆನಂದ ಬಾಷ್ಪವೋ ತಿಳಿಯಬೇಕು.. ಆದರೆ..
ಕಲ್ಪನಾ ಲೋಕದಲ್ಲೇ ಉಳಿದುಬಿಟ್ಟರೆ ನಗರದಲ್ಲಿ ಕಂಡುಕೊಂಡಿರುವ ಉದ್ಯೋಗ, ಸಂಪಾದನೆ ಏನಾಗಲಿದೆ..? ಕನಸು ಕೇವಲ ಜೇಡರ ಬಲೆಯೊಳಗೆ ಕಾಣಿಸಿದ ಮಂಜಿನ ಮುತ್ತಿನಂತೆ..
ಸುಂದರ ಹೂವು ಬೇಕೆಂದರೆ ಮುಳ್ಳಿನ ಸವಾಲನ್ನೂ ಎದುರಿಸಲೇಬೇಕಲ್ಲವೇ..?
ದಿನವೂ ಕಂಡಿದ್ದನ್ನೇ ಕಂಡರೆ ಬೇಜಾರು ಖಂಡಿತ.. ನನ್ನಂಥವನಿಗೆ ಈ ದೃಶ್ಯ ಅಪರೂಪಕ್ಕೊಮ್ಮೆ ಸವಿಯಲೇ ಸೊಗಸು.. ವಾಸ್ತವಕ್ಕೆ ಬಂದಾಗ ಎಲ್ಲವೂ ಸ್ಪಷ್ಟ.. ಎಂದಿನಂತೆ ಸುಂದರ.. ಲವಲವಿಕೆಯ ಆಗರ..!
- ಚಳಿಗಾಲದ ಆರಂಭದಲ್ಲಿ ಮತ್ತು ಕೊನೆಯ ದಿನಗಳಲ್ಲಿ ನಮ್ಮೂರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕಲ್ಮಡ್ಕ ಯಾವುದೇ ಹಿಲ್ ಸ್ಟೇಷನ್‍ಗಿಂತ ಕಡಿಮೆಯೇನಲ್ಲ. ಅಂತಹ ಒಂದು ದಿನದ ಫೊಟೋಗಳು ಇಲ್ಲಿವೆ.
No comments:
Post a Comment