ಐತ. ಅವನೊಬ್ಬ ನಿಷ್ಪ್ರಯೋಜಕ.. ಎಂಥದ್ದಕ್ಕೂ ಲಾಯಕ್ಕಲ್ಲದವ. ಹೆಂಡತಿ ಮಕ್ಕಳಿಗೆ ಊಟಕ್ಕೆ ಗತಿಯಿಲ್ಲದಿದ್ದರೂ ಅಡ್ಡಿಯಿಲ್ಲ, ಕಿವಿತುಂಬ ಬೈಗುಳ, ಮೈತುಂಬ ಹೊಡೆತ ಮಾತ್ರ ಒಂದು ದಿನವೂ ತಪ್ಪಿದ್ದಲ್ಲ. ಇವನ ಸ್ತುತಿ ಇನ್ನೂ ಇದೆ. ಕೂಲಿ ಕೆಲಸ ಮಾಡಿ ಸಿಕ್ಕ 50 ರೂಪಾಯಿಯಲ್ಲಿ ಬಹುಪಾಲು `ಅದಕ್ಕೆ' ಮೀಸಲು..! ಎಲೆ, ಅಡಿಕೆ, ಗುಟ್ಕಾ ಜಗಿದು ಬಾಯಿಗೆ ಕೆಂಪು ಕೋಟೆಯ ಸ್ವರೂಪ..! ಪೊಟ್ಟು ಬೀಡಿಯ ಧಮ್ ಶ್ವಾಸಕೋಶ ಸೇರದಿದ್ದರೆ ಮೈಗೆ ಗಾಳಿ ಸೇರುವುದಿಲ್ಲ ಎಂಬ ಪರಿಸ್ಥಿತಿ. ತಲೆಗೆ ಕೊಬ್ಬರಿ ಎಣ್ಣೆ ಕಾಣದೇ ಕೂದಲು ತಿಂಗಳುಗಟ್ಟಲೆ ಗಂಟುಕಟ್ಟಿದ್ದರೂ ಪರವಾಗಿಲ್ಲ. ಹೊಟ್ಟೆಗೆ ಮಾತ್ರ ಎಣ್ಣೆ ಬೀಳಲೇಬೇಕೆಂಬ ಅಲಿಖಿತ ನಿಯಮ ಇಟ್ಟುಕೊಂಡವನು. ಸದಾ ಬೇಸರದ ಮುಖ ಹೊತ್ತೇ ಸಾಗುವವನು. ನಾನು 15 ವರ್ಷಗಳ ಹಿಂದೆ ಓದುವುದಕ್ಕಾಗಿ ಪಟ್ಟಣಕ್ಕೆ ಬರುವಾಗ ಅವನು ಹೇಗಿದ್ದನೋ ಈಗಲೂ ಹಾಗೇ ಇದ್ದಾನೆ ಅಂತ ಅಮ್ಮ ಒಮ್ಮೆ ಹೇಳಿದ್ದ ನೆನಪು.
ಆದರೆ, ಇಂದು ನಾನು ಕಾಣುತ್ತಿರುವ ಐತನಿಗೂ ಅಮ್ಮ ಫೋನಿನಲ್ಲಿ ಹೇಳಿದ್ದ ಐತನಿಗೂ ಅಜಗಜಾಂತರ ವ್ಯತ್ಯಾಸ ಕಾಣ್ತಿದೆಯಲ್ಲ..! ಅವನ್ನಲ್ಲೇನೋ ಬದಲಾವಣೆ ಇದೆ. ಹೊಸ ಚೈತನ್ಯ ಅವನನ್ನು ಆವರಿಸಿಕೊಂಡಂತಿದೆ. ಕಳೆದ ಎರಡು ಮೂರು ದಿನಗಳಿಂದಲೇ ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಬಸವನಹುಳದಂತಿದ್ದವನು ಇಂದು ಲವಲವಿಕೆಯಿಂದ ಓಡಾಡುತ್ತಿದ್ದಾನೆ. ಎಲ್ಲಕ್ಕೂ ಮಿಗಿಲಾಗಿ ಮೇಲೆ ಹೇಳಿದ ಐತನೇ ಇವನಾ ಎನ್ನುವಷ್ಟು ಬದಲಾಗಿದ್ದಾನೆ. ಅಮ್ಮ ಕೂಡ ಇದನ್ನು ಗಮನಿಸಿದ್ದಾರೆ.
ಯಾವತ್ತೂ ಹಾಸಿಗೆಯಿಂದ ಎದ್ದು ನಿತ್ಯಕರ್ಮ ಮುಗಿಸಿ ಸೀದಾ ಕೆಲಸಕ್ಕೆ ಹೋಗುತ್ತಿದ್ದವನು ಇವತ್ತು ಬೆಳಗ್ಗೆಯೇ ಎದ್ದು ಕೋಲ್ಗೇಟು ಪೇಸ್ಟನ್ನು ನಿನ್ನೆ ಎಲೆ ಅಡಿಕೆ ತಿನ್ನುವಾಗ ಹಚ್ಚಿದ್ದ ಸುಣ್ಣವಿದ್ದ ತನ್ನ ತೋರು ಬೆರಳಿಗೆ ಮೆತ್ತಿ `ಕೆಂಪುಕೋಟೆ ಬಾಗಿಲ'ನ್ನು ತಾಜ್ಮಹಲ್ ಮಾಡುವ ಯತ್ನ ಮಾಡಿದ್ದಾನೆ..! ನಂತರ ಬಾವಿಯಿಂದ ನೀರು ಎತ್ತಿ ಮೈಗೆ ಹಾಕಿಕೊಂಡು ಅದ್ಯಾವುದೋ ಘಮಘಮ ಸೋಪನ್ನು ಮೈಗೆ ಎರಡು ಮೂರು ಬಾರಿ ತಿಕ್ಕಿ ತೊಳೆದಿದ್ದಾನೆ. ಇದೂ ಸಾಲದು ಅಂತ ನೀಲಿ ಬಣ್ಣದ ಶಾಂಪೂ ಪ್ಯಾಕೇಟನ್ನು ಒಡೆದು ಸ್ನಾನವಾದ ನಂತರ ಕಂಕುಳಗಳಿಗೆ ಹಚ್ಚಿಕೊಂಡು ಮೂಸಿ ನೋಡಿಕೊಂಡಿದ್ದಾನೆ. ಕನ್ನಡಿ ಮುಂದೆ ನಿಂತು ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿ ಒಪ್ಪವಾಗಿ ತಲೆ ಬಾಚಿ `ನಾನು ಇಷ್ಟೊಂದು ಚೆಂದ ಇದ್ದೇನಾ' ಅಂತ ಎರಡು ಮೂರು ಸರ್ತಿ ನೋಡಿಕೊಂಡಿದ್ದಾನೆ.
ಯಾವತ್ತೂ ಕೂಡ ನಮ್ಮ ಊರಿನಲ್ಲಿ ಇಷ್ಟೊಂದು ದೊಡ್ಡದಾಗಿ ಮೈಕು, ಪಟಾಕಿ, ಗರ್ನಾಲ್, ವಾದ್ಯಗಳ ಸದ್ದು ಕೇಳಿದ್ದೇ ಇಲ್ಲ. ಬೈಸಾರಿಯಾದರೆ ಸಾಕು ಮನೆಗಳತ್ತ ಸಾಗುವ ಜನ ಇವತ್ತು ಊರ ಬಯಲಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ರಾತ್ರಿ ಎಂಟಾದರೆ ಹೊದ್ದು ಮಲಗುವ ಗ್ರಾಮ ನಮ್ಮದು. ಡಾಕ್ಟ್ರ ಮನೆಯಿಂದಲೋ ಇಲ್ಲಾ ಜಿನ್ನಪ್ಪನ ಮನೆಯಿಂದಲೋ ನಾಯಿಗಳು ಬೊಗಳುವ ಶಬ್ದ ಬಿಟ್ಟರೆ ಮತ್ತೇನೂ ಕೇಳದಷ್ಟು ನಿಶ್ಶಬ್ದವಿರುತ್ತದೆ. ರಾತ್ರಿ ಏಳೂಮುಕ್ಕಾಲಕ್ಕೆ ವಾಹನದ ಸದ್ದು ಕೇಳಿದರೆ ಅದು ರಾತ್ರಿ ಹಾಲ್ಟ್ ಬಸ್ ಎಂದೇ ಊರಿನ ಅಷ್ಟೂ ಜನರಿಗೆ ತಿಳಿಯುತ್ತದೆ. ಅದರ ಆಧಾರದಲ್ಲೇ ನಾಳೆ ಪೇಟೆಗೆ ಹೋಗುವ ಕಾರ್ಯಕ್ರಮ ನಿಗದಿಯಾಗುತ್ತದೆ..! ಆದರೆ, ಇವತ್ತು ಹಾಗಿಲ್ಲ. ಈಗ ಗಂಟೆ ರಾತ್ರಿ ಎಂಟು ಕಳೆದಿದೆ. ಆದರೂ ವಾಹನಗಳು ಒಂದೊಂದಾಗಿ ಬರುತ್ತಲೇ ಇವೆ. ಜನರ ತಂಡವೂ ಕೂಡ. ಇಷ್ಟೆಲ್ಲಾ ತಲೆಕೆಡಿಸಿಕೊಂಡು ಯೋಚನೆ ಮಾಡ್ತಿರುವಾಗ ಅಡುಗೆ ಕೋಣೆಯಿಂದ ಅಮ್ಮ, `ಶಿವೂ.. ಒತ್ತೆಕೋಲ ನೋಡೋದಕ್ಕೆ ಹೋಗೋದಿಲ್ವೇನೋ..?' ಎಂದರು. ಓ.. ಹೌದಲ್ಲಾ.. ಇವತ್ತು ವಿಷ್ಣುಮೂರ್ತಿ ಒತ್ತೆಕೋಲ. ಗ್ರಾಮದಲ್ಲಿ ವರ್ಷಾವಧಿ ಜಾತ್ರೆ. ಇಷ್ಟೆಲ್ಲಾ ಬದಲಾವಣೆ ಈ ದಿನ ಕಂಡುಬಂದಿದ್ದು ಇದೇ ಕಾರಣಕ್ಕೆ. ನಿಜ. 15 ವರ್ಷಗಳಲ್ಲಿ ಸಾಕಷ್ಟು ಸರ್ತಿ ಮನೆಗೆ ಬಂದಿದ್ದರೂ ಒಮ್ಮೆಯೂ ಒತ್ತೆಕೋಲ ನಡೆಯುವ ಸಂದರ್ಭದಲ್ಲಿ ಬಂದಿರಲಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಚಾಕರಿಗೆ ಎಂತಾನೇ ನಮ್ಮ ಜೀವನ ಒತ್ತೆಯಾಗಿರುವಾಗ ಊರಿನ ಒತ್ತೆಕೋಲ ನೋಡುವುದಕ್ಕೆ ಬರಲು ಹೇಗೆ ಸಾಧ್ಯ ಎಂದುಕೊಳ್ಳುತ್ತಾ, `ಹೋಗ್ತೀನಮ್ಮಾ.. ಸ್ನಾನ ಮಾಡ್ಕೊಂಡು ಬರ್ತೇನೆ' ಎಂದು ಎದ್ದು ನಿಂತೆ.
ಮುಗಿಲೆತ್ತರ
ಕ್ಕೆ ವ್ಯಾಪಿಸಿದ್ದ ಕೆಂಪು ಬೆಂಕಿ. ಅದರ ಮಧ್ಯೆ ಧಗಧಗಿಸುತ್ತಿರುವ ಮರದ ದಿಮ್ಮಿಗಳು. ಅದಕ್ಕೆ ಬಾಲ್ದಿಯಲ್ಲಿ ತುಪ್ಪ ಎರೆಚುತ್ತಿರುವ ಒಂದಷ್ಟು ಮಂದಿ. ಅಬ್ಬಾ.. ಎಷ್ಟು ಭಯಂಕರವಾಗಿದೆಯಲ್ಲಾ ಎಂದುಕೊಂಡು ಆಚೆ ಈಚೆ ನೋಡಿದೆ. ಅಷ್ಟರಲ್ಲಿ ನನ್ನ ಪಕ್ಕದಲ್ಲೇ ಐತ ನಗುತ್ತಾ ನಿಂತಿದ್ದ. `ಮೇಲೇರಿಗೆ ಬೆಂಕಿ ಕೊಡುವ ಹೊತ್ತಿಗೆ ನೀವು ಬರ್ಲಿಲ್ವಾ..?' ಎಂದ. `ಇಲ್ಲಾ.. ಅದೂ... ಮನೆಯಲ್ಲಿ ಒಂಚೂರು ಕೆಲಸ ಇತ್ತು.. ಹಾಗೇ..' ಎಂದು ಹೇಳುವಷ್ಟರಲ್ಲಿ ಅವನ ಗಮನ ಸ್ವಲ್ಪ ದೂರದಲ್ಲಿ ಶುರುವಾಗಿದ್ದ ಸಭಾ ಕಾರ್ಯಕ್ರಮದತ್ತ ಸಾಗಿತು. `ದನಿಗಳು ಎಂತ ಹೇಳ್ತಾರೆ ಕೇಳುವ ಬನ್ನಿ.. ದೈವಸ್ಥಾನವನ್ನು ಇನ್ನೂ ಚೆಂದ ಮಾಡ್ಲಿಕ್ಕೆ ಎಂತಾದರೂ ಹೇಳ್ಯಾರು..' ಎನ್ನುತ್ತಾ ಕುರ್ಚಿಯ ಕಡೆಗೆ ಹೆಜ್ಜೆ ಹಾಕಿದ. ಎಲಾ ಇವನಾ.. ಮಣ್ಣು ಹಿಡಿದ ಕಂಬಾಯ್ನಲ್ಲಿ ಇರ್ತಿದ್ದವನು ಇವತ್ತು ಬಣ್ಣದ ಬಿಳಿ ಪಂಚೆ ಉಟ್ಟು, ಹೆಗಲಿಗೆ ಅಚ್ಚಬಿಳಿಯ ಶಾಲು ಹೊದಿಸಿ ಹಣೆಗೆ ದೊಡ್ಡಕ್ಕೆ ಉದ್ದಕ್ಕೆ ಕುಂಕುಮ ಬೊಟ್ಟು ಇಟ್ಟ ಅವತಾರವೇ..!
ಮನಸ್ಸಿನಲ್ಲೇ ನಗುತ್ತಾ ಹಿಂದಕ್ಕೆ ತಿರುಗಿ ನೋಡಿದರೆ ಮೇಲೇರಿ, ಅಂದರೆ ಕಟ್ಟಿಗೆಯ ರಾಶಿಯಲ್ಲಿ ಬೆಂಕಿಯ ಅಕ್ಷರಶಃ ನರ್ತಿಸುತ್ತಿತ್ತು. ಚಳಿಗಾಲವಿದ್ದರೂ ಸುತ್ತಮುತ್ತಲಿನ ವಾತಾವರಣ ಅತಿ ಹೆಚ್ಚು ಬಿಸಿಯೇರಿತ್ತು. ಪಕ್ಕದಲ್ಲಿರಲಿ, ಕನಿಷ್ಠ 40-50 ಮೀಟರ್ ದೂರಕ್ಕೂ ಶಾಖದ ಸ್ಪರ್ಶವಾಗುತ್ತಿತ್ತು.
ಊರಿನ ಹಲವು ಪರಿಚಯಸ್ಥ ಮುಖಗಳೊಂದಿಗೆ ಒಂದಿಷ್ಟು ಹರಟೆ ಹೊಡೆಯುತ್ತಾ ಹಳ್ಳಿ-ಪಟ್ಟಣಗಳ ನಡುವೆ ಮಾತಿನ ಓಘವನ್ನು ಹರಿಯ ಬಿಡುತ್ತಾ ಕಾಲ ಕಳೆದಿದ್ದಾಯಿತು. ಅಷ್ಟರಲ್ಲಿ ಸಭಾ ಕಾರ್ಯಕ್ರಮ ಮುಗಿದು `ಆಟ' ಶುರುವಾಗುವ ಲಕ್ಷಣ ಕಾಣಿಸಿತು. ವೇದಿಕೆ ಹಿಂಬದಿಯಿಂದ ಚೆಂಡೆಯ ಪೀಠಿಕೆ ಕೇಳಿಸಿತು. ತುಳುನಾಡಿನಲ್ಲಿ ನಡೆಯುವ ಹಿಂದೂ ಧರ್ಮದ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಇದ್ದೇ ಇರುತ್ತದೆ. ನಮ್ಮೂರಿನಲ್ಲಿ ಸಾಮಾನ್ಯವಾಗಿ ವೃತ್ತಿಪರ ಕಲಾವಿದರನ್ನು ಕರೆಸುವ ವಾಡಿಕೆಯಿಲ್ಲ. ಯಾಕೆಂದರೆ, ಸ್ಥಳೀಯ ಕಲಾವಿದರಿಗೆ ಇದರಿಂದ ಅವಕಾಶ ಸಿಗುತ್ತದೆ, ಹಾಗೇ ಮೇಳಗಳ ಕಲಾವಿದರಿಗೆ ದುಬಾರಿ ಸಂಭಾವನೆ ಕೊಡುವುದು ತಪ್ಪುತ್ತದೆ ಎಂಬ ಉದ್ದೇಶ. ಇದು ಒಳ್ಳೆಯದೇ.. ಇರಲಿ.. ಆಟ ಶುರುವಾಯಿತು.. ನನಗೂ ಆಸಕ್ತಿ.. ಸಾಕಷ್ಟು ವರ್ಷಗಳ ಬಳಿಕ ಆಟ ನೋಡುತ್ತಿದ್ದೇನೆ. ಚೆಂಡೆಯ ಪೆಟ್ಟಿಗೆ ಕುಣಿತ ಬಾರದ ನಾನೂ ಕುಣಿದುಬಿಡಲೇ ಎನ್ನುವಂಥ ಹುಚ್ಚೇಳುತ್ತಿದೆ. ಒಂದೊಂದೇ ಪಾತ್ರಗಳು ಬಂದು ಹೋದವು. ಅಸುರಗಣ ಮತ್ತು ದೇವ ಗಣಗಳ ನಡುವೆ ಯುದ್ಧದ ಸಂದರ್ಭ. ಬಣ್ಣದ ವೇಷ.. ತಡ್ಪೆ ಕಿರೀಟ.. ಕೈಯಲ್ಲಿ ಕತ್ತಿ.. ಅದ್ಭುತ ಪೋಷಾಕು. ರಕ್ಕಸ ಪಾತ್ರಧಾರಿ ದೇವೇಂದ್ರನ ಪಾತ್ರಧಾರಿಗೆ ಯುದ್ಧಕ್ಕೆ ಆಹ್ವಾನ ಕೊಟ್ಟ. `ಎಲವೋ ದೇವೇಂದ್ರ.. ನಿನ್ನ ಹೇಡಿ ಹಿಂಬಾಲಕರನ್ನು ಪುಡಿಗಟ್ಟಿ ಅಟ್ಟಿರುವೆ. ನಿನ್ನಲ್ಲಿ ಕಿಂಚಿತ್ತು ಧೈರ್ಯವಿದ್ದರೂ ಬಾ ಯುದ್ಧಕ್ಕೆ...' ಎಂದ. ಇದಕ್ಕೆ ಪ್ರತಿಯಾಗಿ ದೇವೇಂದ್ರ ಕೂಡ ವಾಗ್ಝರಿ ಹರಿಯಬಿಡಬೇಕು. ರಾಕ್ಷಸ ಪಾತ್ರಧಾರಿಯನ್ನು ಉದ್ದೇಶಿಸಿ, `ನಿನ್ನ ತಲೆಗೆ ಎಮ್ಮೆ ಅತ್ತಿದೆ.. ನನ್ನನ್ನು ಹೇನೆಂದು ಬಲ್ಲೆ..' ಎಂದ.. ಸೇರಿದ್ದ ಇಡೀ ಪ್ರೇಕ್ಷಕ ಸಮೂಹದಲ್ಲಿ ನಗೆಯ ಅಲೆ ತೇಲಿಬಂತು..!

ಇಷ್ಟೆಲ್ಲದರ ನಡುವೆಯೂ ನನ್ನ ಗಮನವೆಲ್ಲ ಇದ್ದಿದ್ದು ಒತ್ತೆಕೋಲದ ಕಡೆಗೆ. ತಿರುಗಿ ನೋಡಿದರೆ ಅಲ್ಲಿ ಬೆಂಕಿ ಆರಿತ್ತು. ಒಂದಷ್ಟು ಜನ ಉದ್ದನೆಯ ಹಸಿ ಬಿದಿರಿನ ದೊಡ್ಡ ಗಳ ಹಿಡಿದು ಬರುತ್ತಿದ್ದರು. ಯಕ್ಷಗಾನವನ್ನು ಅರ್ಧಕ್ಕೇ ಬಿಟ್ಟು ಹಿಂದೆ ಹೆಜ್ಜೆ ಹಾಕಿದೆ. ಆಕಾಶವನ್ನೂ ಸುಟ್ಟುಬಿಡುವೆ ಎಂದು ಕುಣಿದಿದ್ದ ಬೆಂಕಿ ತಣ್ಣಗಾಗಿತ್ತು. ಬಿದಿರು ಇಲ್ಲಿಗೇಕೆ ಎಂದುಕೊಂಡು ನೋಡುತ್ತಿದ್ದಂತೆಯೇ, ನಾಲ್ಕೈದು ಮಂದಿ ಕೆಂಡದ ರಾಶಿಗೆ ಬಿದಿರನ್ನು ನುಗ್ಗಿಸಿ ಕಿಡಿಯನ್ನು ಮೇಲಕ್ಕೆ ಚಿಮ್ಮಿಸಿದರು. ಅಬ್ಬ.. ಆ ದೃಶ್ಯ ನನಗೆ ಈಗಲೂ ಕಣ್ಣಿಗೆ ಕಟ್ಟುವಂತಿದೆ. ಸುಡದೇ ಉಳಿದುಕೊಂಡಿದ್ದ ಮರದ ದಿಮ್ಮಿಗಳನ್ನು ಹುಡುಕಿ ತೆಗೆದು ಅವುಗಳನ್ನು ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಇದು. ಸುಮಾರು ಅರ್ಧ-ಮುಕ್ಕಾಲು ಗಂಟೆಯ ಬಳಿಕ ಕೆಂಡದ ರಾಶಿ ಸಿದ್ಧವಾಯಿತು. ಅಷ್ಟರಲ್ಲಿ ಗಂಟೆ ಬೆಳಗಿನ ಜಾವ ಸುಮಾರು ನಾಲ್ಕು ಇರಬಹುದು. ಇದ್ದಕ್ಕಿದ್ದಂತೆ ಆಕಾಶಕ್ಕೆ ಸಿಡಿದ ಸುಡುಮದ್ದೊಂದು ಮುಂದಿನ ಏನೋ ಮುಖ್ಯ ಕಾರ್ಯಕ್ರಮವೊಂದರ ಮುನ್ಸೂಚನೆ ಕೊಟ್ಟಿತು. ನಿಜ. ನನ್ನ ಊಹೆ ಸುಳ್ಳಾಗಲಿಲ್ಲ. ವಾದ್ಯ ವೃಂದದವರೂ ಚುರುಕಾದರು. ಏರು ಧ್ವನಿಯಲ್ಲಿ ಒಂದು ರೀತಿಯ ಗಂಭೀರ ವಾತಾವರಣ ಸೃಷ್ಟಿಸುವಂತೆ ವಾದ್ಯ ನುಡಿಯುತ್ತಿದ್ದರೆ ಅಲ್ಲಿದ್ದ ವಾತಾವರಣ ಸಂಪೂರ್ಣವಾಗಿ ಪರವಶವಾಗಿತ್ತು.
ಅದೋ.. ದೈವಸ್ಥಾನದ ಎದುರಿನಿಂದ ಕೆಂಡದ ರಾಶಿಯತ್ತ ಯಾರೋ ಓಡಿ ಬರುತ್ತಿದ್ದಾರಲ್ಲಾ... ಮತ್ತಿಬ್ಬರು... ಮತ್ತೆ ಮೂವರು.. ಕೈಯಲ್ಲಿ ಕತ್ತಿ ಹಿಡಿದಿದ್ದಾರೆ. ಬಿಳಿ ಪಂಚೆ ಉಟ್ಟು ಅದಕ್ಕೆ ಕೆಂಪು ಶಾಲನ್ನು ಬಿಗಿದಿದ್ದಾರೆ. ಅರೆ.. ಅವರ್ಯಾಕೆ ಕೆಂಡದ ರಾಶಿಯ ಮೇಲೆ ಓಡುತ್ತಿದ್ದಾರೆ..? ಅವರ ಕಾಲು ಸುಡುವುದಿಲ್ಲವೇ..? ಅವರಿಗೆ ಶಾಖ ತಟ್ಟುವುದಿಲ್ಲವೇ..? ಇಷ್ಟೆಲ್ಲಾ ಪ್ರಶ್ನೆಗಳೂ ಒಮ್ಮೆಗೇ ಮೂಡಿ ಬಂದರೆ ಉತ್ತರ ಸಿಗಲು ಸಾಧ್ಯವೇ ಹೇಳಿ..? ಇದಕ್ಕೆ ನಮ್ಮ ಐತನೇ ಉತ್ತರ ಹೇಳಲು ಸಾಧ್ಯ ಎಂದುಕೊಂಡು ಕೊರಳು ತಿರುಗಿಸಿದೆ. ಊಹ್ನೂ... ಎಲ್ಲೂ ಇಲ್ಲ... ಛೆ ಇಂಥ ಸಂದರ್ಭದಲ್ಲೇ ಈ ಮಾರಾಯ ಕೈ ಕೊಡಬೇಕಾ.. ಆಮೇಲೆ ಸಿಗ್ಲಿ.. ಜೋರು ಮಾಡಿ ಕೇಳ್ತೇನೆ ಎಂದು ಸ್ವಗತ ನುಡಿದೆ.
ಅಂದಹಾಗೆ, ಈ ಒತ್ತೆಕೋಲ ಮಾಡಿಸಿದವರು ಊರಿನ ಪ್ರಮುಖರಲ್ಲಿ ಒಬ್ಬರು. ಊರಿನ ಜನರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿವರ್ಷ ಈ ಕಾರ್ಯ ಆಯೋಜಿಸುತ್ತಾರೆ. ಊರಿನ ಕೂಲಿಯಾಳುಗಳೆಲ್ಲ ಅವರನ್ನು ದನಿಗಳೆಂದೇ ಕರೆಯುತ್ತಾರೆ. ಐತನಿಗೂ ಅವರೇ ದನಿಗಳು. ಆ ದನಿಗಳು ಈಗ ದೈವದ ಮುಂದೆ ಕೈ ಜೋಡಿಸಿದ್ದಾರೆ. ನಮ್ಮನ್ನು ನೀನೇ ರಕ್ಷಿಸಬೇಕು ಎಂದು ಬೇಡಿಕೊಳ್ಳುತ್ತಿದ್ದಾರೆ. ಅದಕ್ಕೆ ದೈವವೂ ಅವರಿಗೆ ಭರವಸೆ ನೀಡಿದೆ. ನಿನಗೇನೂ ಆಗದಂತೆ ನೋಡಿಕೊಳ್ಳಲು ನಾನಿದ್ದೇನೆ.. ಭಯ ಬೇಡ ಎಂದಿದೆ. ಕೈಯಲ್ಲಿದ್ದ ಕತ್ತಿಯನ್ನು ದನಿಗಳ ಹಣೆಗೆ ಮೇಲೆ ಹಿಡಿದು ಅಭಯ ಹಸ್ತ ನೀಡಿದೆ. ಊರ ಜನರಿಗೂ ಇದೇ ರೀತಿ ಅಭಯ ನೀಡಿದೆ. ಅಲ್ಲಿಗೆ ಪ್ರಧಾನ ಹಂತದ ಆರಾಧನೆ ಮುಗಿದಿದೆ. ಮತ್ತೇನಿದ್ದರೂ ಪ್ರಸಾದ ವಿತರಣೆ, ಕೋಳಿ ಬಲಿ.. ಇತ್ಯಾದಿ ಇತ್ಯಾದಿ.. ಆದರೆ, ನನ್ನ ಕುತೂಹಲಕ್ಕೆ ಉತ್ತರ ಹುಡುಕಿ ನಾನು ಹೊರಟೆ.
ಅಬ್ಬಾ ರಾತ್ರಿ ಎಂಥಾ ಅನುಭವ.. ಯಾವುದೋ ಬೇರೆಯದೇ ಲೋಕಕ್ಕೆ ಹೋದ ಹಾಗೆ.. ನಮ್ಮೂರಿನದ್ದೇ ಕಾರ್ಯಕ್ರಮ ಇದಾದರೂ, ಪಟ್ಟಣ ಸೇರಿದ ನನಗೆ ಇದು ಹೊಸದೇ. ತುಳುನಾಡಿನ ಜಾನಪದ ಸಂಸ್ಕತಿ ಅದೆಷ್ಟು ಶ್ರೀಮಂತ ಎಂದುಕೊಂಡೆ. ಇದೇ ಯೋಚನೆಯಲ್ಲಿದ್ದ ನನ್ನನ್ನು `ದನಿ'ಗಳ ಗಟ್ಟಿಯಾದ ಸ್ವರ ಎಚ್ಚರಿಸಿತು. `ಐತಾ.. ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ಮಾರಾಯ. ದೈವ ಪ್ರಸನ್ನವಾಗಿರುತ್ತದೆ. ಮುಂದಿನ ವರ್ಷವೂ ನೀನೇ ಭೂತ ಕಟ್ಟು' ಎಂದರು.. ಎರಡು ಮೂರು ಗಂಟೆ ಮೊದಲು ದನಿಗಳಿಗೆ ಅಭಯ ನೀಡಿದ್ದವನು ಮಡಚಿ ಕಟ್ಟಿದ್ದ ಪಂಚೆಯನ್ನು ಇಳಿಬಿಟ್ಟು ಬಗ್ಗಿ ನಿಂತು ಕೈ ಜೋಡಿಸಿ ದೈನ್ಯದಿಂದ `ಆಯ್ತು ದನಿ' ಎಂದ..!
----------------------------------------------------------------------------------
ಪದಾರ್ಥಗಳು (ಪದ+ಅರ್ಥಗಳು..!)
ಮೇಲೇರಿ = ದೈವ ಕಾರ್ಯಕ್ಕೆ ಅಚ್ಚುಕಟ್ಟಾಗಿ ಒಣ ಸೌದೆಯನ್ನು ಇಡುವುದು
ಕಂಬಾಯ್ = ಲುಂಗಿ
ಬೈಸಾರಿ = ಸಂಜೆ
ಬಾಲ್ದಿ = ಬಕೆಟ್
ಗರ್ನಾಲ್ = ದೊಡ್ಡ ಪಟಾಕಿ
(ಈ ಬರಹದಲ್ಲಿರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ, ಊರಿಗೆ ಸಂಬಂಧಿಸಿದ್ದಲ್ಲ)
ಚೆನ್ನಾಗಿದೆ.. ನವಿರಾಗಿ ಓದಿಸಿಕೊಂಡು ಹೋಯಿತು...
ReplyDeleteಹೀಗೆ ಬರೆಯುತ್ತಿರಿ ಸದಾಶಿವ. ಚಿತ್ರಗಳೂ ಗಮನ ಸೆಳೆಯಿತು
ಧನ್ಯವಾದಗಳು ಸೂರ್ಯ..
ReplyDelete