Wednesday, September 16, 2009

ಬದುಕಲ್ಲಿ ಹಸಿರುಂಟು...

ಹಸಿರಲ್ಲಿ ನಾನುಂಟು ನೀನುಂಟು ಜೀವನವುಂಟು. ಬದುಕಿಗೆ ಆಸರೆ ಇಲ್ಲುಂಟು. ಸಮತೋಲಿತ ಪಯಣದಲ್ಲಿ ಹಿತವುಂಟು.

ಮಾತೆಯ ಮಡಿಲಲ್ಲಿ ಮುತ್ತುಂಟು, ಹಸಿದವಗೆ ಕೈ ತುತ್ತುಂಟು. ಹಿತ ಕಾಯುವ ಸಂಗವುಂಟು.
ಮನ, ಮನೆ ಇಲ್ಲುಂಟು. ಒಲವುಂಟು, ಒಲಿದ ಜೀವಗಳ ಮಿಲನದ ಸೊಗಸುಂಟು.
ಕನಸುಗಳಿಗೆ ಬಲಿತ ರೆಕ್ಕೆ ನೀಡುವ ಮಾರ್ಗವುಂಟು. ಸರಿ ದಾರಿ ತೋರುವ ಅನುಭವದ ಜೊತೆ ನನ್ನ ನಿನ್ನ ಪಯಣವುಂಟು.
ಸಾಗಿದ ಹಾದಿಯನೊಮ್ಮೆ ತಿರುಗಿ ನೋಡಿದರೆ ಎಲ್ಲೆಲ್ಲು ಹಸಿರಿನ ಚಾದರವೇ. ಕಲ್ಲು ಮುಳ್ಳು ನಮಗೇಕೆ, ಕೊನೆಯಲ್ಲಿ ಸಿಕ್ಕ ಹಸಿರೆ ನಮ್ಮ ಜೊತೆಯಿರಲು ಬದುಕಲ್ಲಿ ಖುಷಿಯುಂಟು...
** Please click on the images to see them clear.

Thursday, August 13, 2009

ಆಕಾಶದಿಂದ ಧರೆಗಿಳಿದ ರಂಭೆ...!

ಈ ಬಾರಿ ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ರಾಜ್ಯದ ಸುಂದರ ಜಲಪಾತಗಳಲ್ಲಿ ಒಂದಾದ ಗಗನಚುಕ್ಕಿಯ ಸೌಂದರ್ಯ ಇಮ್ಮಡಿಯಾಗಿದೆ. ದೂರದೂರಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಾನೂ ಅವರಲ್ಲಿ ಒಬ್ಬನಾಗಿ ಭೇಟಿ ನೀಡಿದ್ದೆ. ಕೆಲವು ಫೋಟೋಗಳು ಇಲ್ಲಿವೆ. ನೋಡಿ, ಅನಿಸಿಕೆ ತಿಳಿಸಿ.
ಶಿವನ ಸಮುದ್ರದ ಸುತ್ತಲೂ ಹಸಿರಿನ ಹೊದಿಕೆ. ಹಾಗೆ ನಮ್ಮ ದೃಷ್ಟಿಯನ್ನು ಸ್ವಲ್ಪ ಮೇಲಕ್ಕೆ ಹರಿಸಿದಾಗ ಕಾಣಿಸುವುದೇ ದೃಶ್ಯ ಕಾವ್ಯ. ಅಲ್ಲೇ ಎಲ್ಲೋ ದೂರದಲ್ಲಿ ಭೂಮಿತಾಯಿ ಮತ್ತು ಆಕಾಶ ಸುಖ-ದುಃಖ ವಿಚಾರಿಸಿಕೊಳ್ಳುತ್ತಿವೆಯೋ, ಅದೇ ರೀತಿ ಹತ್ತಿಯ ಉಂಡೆಯಂತೆ ಕಾಣುವ ಮೋಡವನ್ನು ತಮ್ಮ ಮಧ್ಯವರ್ತಿಯಾಗಿ ಇಟ್ಟುಕೊಂಡಿವೆಯ ಎನ್ನುವ ಸಂಶಯ ಸಹಜವಾಗಿ ಮೂಡುತ್ತಿದೆ...! ದೂರದಿಂದಲೇ ಕೈಬೀಸಿ ಕರೆಯುವ ಹಾಲಿನ ಹೊಳೆಯಂತಹ ಜಲಧಾರೆ. ನೋಡುತ್ತಾ ನಿಂತರೆ ಇನ್ನಷ್ಟು ನೋಡಬೇಕು ಅನಿಸುವ ರುದ್ರ ರಮಣೀಯತೆ. ಎದುರಿಗೇ ನನ್ನದೊಂದು ಕುಟೀರ ಇರಬಾರದೇ ಎನ್ನುವ ಒಳ ಮನಸ್ಸು..! ಧೋ ಎಂದು ಕಾವೇರಿ ಮಾತೆ ಕೆಳಗಿಳಿಯುತ್ತಿದ್ದರೆ ಅಲ್ಲೊಂದು ಮಂಜಿನ ಲೋಕದ ಸೃಷ್ಟಿ. ಆ ನೀರ ಹನಿಗಳ ನಡುವಿಂದ ಸೂರ್ಯ ರಶ್ಮಿ ಹಾಯ್ದು ಬಂದಾಗ ಮೂಡುವ ಕಾಮನ ಬಿಲ್ಲು. ಜೊತೆಗೆ ಬಾರದ ಪ್ರಿಯತಮೆಯ ನೆನೆಯುತ್ತಾ ಬಣ್ಣದ ಬಿಲ್ಲನ್ನು ದಿಟ್ಟಿಸುತ್ತಿದ್ದಂತೆ ಕಿಚಿಪಿಚಿ ಎನ್ನುತ್ತಾ ಅಲ್ಲೇ ಸುಳಿದಾಡುವ ಪ್ರಣಯ ಪಕ್ಷಿಗಳು...! ಹ್ನೂ..!! ಅದೇನೇ ಇರಲಿ, ಅಬ್ಬಾ..! ಈ ಪ್ರಕೃತಿ ಇಂತಹ ಅದೆಷ್ಟು ಅಚ್ಚರಿಗಳನ್ನು ತನ್ನ ಮಡಿಲಲ್ಲಿ ಹುದುಗಿಸಿ ಇಟ್ಟಿದೆಯೋ, ತಿಳಿದವರಾರು..?! ಅನ್ನೋ ಕುತೂಹಲ ಒಂದು ಕ್ಷಣ ನಮ್ಮನ್ನು ಕಾಡುತ್ತದೆ. ಒಟ್ಟಿನಲ್ಲಿ ಪ್ರತಿ ವರ್ಷವೂ ಇದೆ ರೀತಿ ಮಳೆಯಾಗಿ, ನಾಡಿನ ನದಿಗಳು ಭರ್ತಿಯಾಗಲಿ. ಉಣ್ಣುವ ಅನ್ನಕ್ಕೆ, ನೋಡುವ ಕಣ್ಣಿಗೆ ಸಂತಸ ನೀಡಲಿ ಎಂಬುದೇ ಸಕಲ ಜೀವ ರಾಶಿಯ ಪ್ರಾರ್ಥನೆಯಾಗಲಿ... ಅಲ್ಲವೇ...!?

Tuesday, June 30, 2009

ಪಥಾನುಯಾಯಿ

"ಅಪ್ಪಾ.. ನಮ್ಮ ತಲೆಮೇಲೆ ಎರಡು ಕಾಳು ಅಕ್ಷತೆ ಇಟ್ಟು ಮನದುಂಬಿ ಆಶೀರ್ವದಿಸಿ ಬಿಡು. ಅಷ್ಟೆ ಸಾಕು. ಅದನ್ನೇ ನೀನು ನನಗಾಗಿ ಧಾರೆಯಿತ್ತ ಸರ್ವಸ್ವ ಅಂತ ಭಾವಿಸಿ ಜೀವನ ಪರ್ಯಂತ ಸುಖಿಯಾಗಿರುತ್ತೇನೆ...''. ಮಗಳು ಪ್ರೀತಿ ತಾನು ಪ್ರೇಮಿಸಿ ಕದ್ದು ಮುಚ್ಚಿ ಮದುವೆಯಾದ ಆಕಾಶ್ ನೊಂದಿಗೆ ಮನೆಯೆದುರು ಗೋಗರೆಯುತ್ತಿದ್ದಳು. ಆದರೆ ತಂದೆ ರಾಜೀವ ತನ್ನ ಕಠಿಣ ನಿಲುವನ್ನು ಇನ್ನೂ ಬಿಗಿಗೊಳಿಸಿ, ''ನೀನು ನನ್ನ ಮಗಳೇ ಅಲ್ಲ !. ನಿನ್ನಮ್ಮ ಯಾವುದೋ ವಿಷ ಜನ್ತುವನ್ನ ಹಡೆದಿದ್ದಾಳೆ ಅಂತ ಭಾವಿಸಿ ಅಂದೇ ಎಲ್ಲಾ ಸಂಬಂಧಗಳನ್ನು ಮರೆತಾಗಿದೆ. ಇನ್ನೊಂದು ಕ್ಷಣ ನೀನು ನನ್ನೆದುರು ನೀನಿದ್ದರೂ ನಾನು ನಾನಗಿರೋಲ್ಲ...!'' ಎಂದು ಘರ್ಜಿಸಿದ. ಪ್ರೀತಿಯ ಪಕ್ಕದಲ್ಲೇ ನಿಂತಿದ್ದ ಆಕಾಶ್, ''ಆಗಿದ್ದೆಲ್ಲ ಒಂದು ಕೆಟ್ಟ ಕನಸು ಅಂತ ಮರೆತು ಬಿಡಿ ಮಾವಯ್ಯಾ... ನಿಮ್ಮ ಪ್ರಕಾರ ನಮ್ಮಿಂದ ತಪ್ಪು ಆಗಿದ್ದರೆ ಅದಕ್ಕೆ ಕ್ಷಮೆ ಬೇಡಲಾದ್ರು ಅವಕಾಶ ನೀಡಿ. ನಾನು ಇವಳನ್ನ ಯಾವುದೇ ಕೊರತೆ ಇಲ್ಲದ ಹಾಗೆ ಬಾಳಿಸ್ತಿನಿ...'' ಎಂದಾಗ ರಾಜೀವ, ''ಏನಂದೆ..? ಯಾವನೋ ಮಾವಯ್ಯ ನಿನಗೆ...?! ಇನ್ನೊಂದ್ಸಲ ಹಾಗೆ ಕರೆದರೆ ಪರಿಣಾಮ ನೆಟ್ಟಗಿರೋಲ್ಲ... ಮಾವಯ್ಯ ಅಂತೆ ಮಾವಯ್ಯ..!'' ಎಂದು ಕಿರುಚಾಡಿದ.
ಆಕಾಶ್ ಓರ್ವ ಶ್ರೀಮಂತ, ಸ್ಫುರದ್ರೂಪಿ ಯುವಕ. ಪ್ರತಿಷ್ಟಿತ ಬ್ಯುಸಿನೆಸ್ಸ್ ಮ್ಯಾನೇಜ್ಮೆಂಟ್ ಕಾಲೇಜ್ ನಲ್ಲಿ ಎಂ ಬಿ ಎ ವ್ಯಾಸಂಗ ಮಾಡಿದ್ದಾನೆ. ಊರಿನಲ್ಲಿ ತಂದೆ ಗಳಿಸಿದ ಆಸ್ತಿಯೂ ಸಾಕಷ್ಟಿದೆ. ಅದು ಸಾಲದು ಎಂಬಂತೆ, ನಗರದಲ್ಲಿ ಎರಡು ಕಡೆ ಬೇರೆ ಬೇರೆ ಉದ್ಯಮಗಳು... ತನ್ನ ಬುದ್ಧಿವಂತಿಕೆಯಿಂದ ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾನೆ. ಇವನ ಚಾಕಚಕ್ಯತೆ ಕಂಡು ಮಹಾನ್ ಎನಿಸಿಕೊಂಡ ಉದ್ದಿಮೆದಾರರೂ ಅಸೂಯೆ ಪಟ್ಟಿದುಂಟು. ಆಕಾಶ್ ಮತ್ತು ಪ್ರೀತಿ ಕಳೆದ ಒಂದು ವರ್ಷದಿಂದ ಗಾಢವಾಗಿ ಪ್ರೇಮಿಸುತ್ತಿದ್ದವರು. ಈ ವಿಚಾರ ತಿಳಿಯದೆ ರಾಜೀವ, ನಾಲ್ಕು ತಿಂಗಳಿಂದ ಬಿಎಸ್ಸಿ ಓದಿರುವ ಮಗಳಿಗೆ ಮದುವೆ ಮಾಡಿಸಲು ಜೋರಾಗಿ ಓಡಾಡುತ್ತಿದ್ದ. ಅದು ಇದು ಎಂದು ಹೇಳಿ ಬಂದ ಹುಡುಗರನ್ನ ಪ್ರೀತಿ ತಿರಸ್ಕರಿಸಿದ್ದಾಯಿತು. ಅಲ್ಲದೆ ಆಕಾಶ್ ಜೊತೆ ವಿಚಾರ ಮಂಡಿಸಿದಳು. ತಮ್ಮಿಬ್ಬರ ಪ್ರಣಯದ ಕುರಿತು ಮನೆಯಲ್ಲಿ ಹೇಳು ಎಂದರೆ ಪ್ರೀತಿ ಕೋಪಿಷ್ಠ ತಂದೆಯ ಬಗ್ಗೆ ವರ್ಣನೆ ಮಾಡಿದಳು...! ಹೋಗಲಿ, ತಾನೆ ಮಾತಾಡುವುದಾಗಿ ಹೇಳಿದರೆ ಪ್ರೀತಿಯಿಂದ ಆತ್ಮಹತ್ಯೆಯ ಬೆದರಿಕೆ... ಇದೊಳ್ಳೆ ಕಥೆಯಾಯಿತಲ್ಲ ಎಂದುಕೊಂಡ ಆಕಾಶ್, ಕೊನೆಗೆ ಎರಡು ದಿನಗಳ ಹಿಂದೆ ಘಾಟಿ ಸುಬ್ರಮಣ್ಯನ ಮುಂದೆ ಪ್ರೀತಿಗೆ ತಾಳಿ ಕಟ್ಟಿದ. ಕಾಣೆಯಾದ ಮಗಳನ್ನು ಹುಡುಕಿ ರಾಜೀವ ಹೈರಾಣಾಗಿದ್ದ. ಪೊಲೀಸರಿಗೆ ದೂರು ನೀಡಿದ್ದು ಆಯ್ತು. ಇಂದು ಮಗಳನ್ನ ಈ ರೂಪದಲ್ಲಿ ನೋಡಿದ್ದ ರಾಜೀವನ ಬಿಪಿ ಸಹಜವಾಗೇ ನೆತ್ತಿಗೇರಿತ್ತು. ಆಕಾಶ್ ಮತ್ತು ಪ್ರೀತಿ ರಾಜೀವನನ್ನು 'ಕ್ಷಮಿಸಿ' ಎಂದು ಪರಿ ಪರಿಯಾಗಿ ಬೇಡಿಕೊಂಡರು. ಆದರೆ, ಯಾವ ರಾಜಿಗೂ ಮಣಿಯದ ರಾಜೀವ, 'ಪ್ರೀತಿ ತನ್ನ ಮಗಳೇ ಅಲ್ಲ. ಇನ್ನು ಮುಂದೆ ತನಗೂ ಅವಳಿಗೂ ಯಾವುದೇ ಸಂಬಂಧವಿಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿದ. ಇಷ್ಟು ಹೊತ್ತು ಸಂಯಮದಿಂದ ವರ್ತಿಸಿದ್ದ ಆಕಾಶ್, ತಾಳ್ಮೆ ಕಳೆದುಕೊಂಡ. ಪ್ರೀತಿಯ ಕೈ ಹಿಡಿದು, ''ನಡಿಯೇ ಪ್ರೀತಿ, ನಾವೇನೋ ತಪ್ಪು ಮಾಡಿದ್ದೇವೆ ನಿಜ. ಅದನ್ನ ಒಪ್ಪಿಕೊಂಡು ಕ್ಸಮಿಸಿ ಎಂದು ಕೇಳಲು ಇವರ ಬಳಿಗೆ ಬಂದದ್ದೆ ತಪ್ಪಾಯ್ತು.! ಇವರ ಹಠ ಇವರಿಗೆ. ನಮ್ಮ ಹಠ ನಮಗೆ...!'' ಎಂದ. ''ಆಕಾಶ್...'' ಎಂದ ಪ್ರೀತಿಯ ಮಾತನ್ನು ಅರ್ಧಕ್ಕೇ ನಿಲ್ಲಿಸಿದ ಆಕಾಶ್, ''ಅಲ್ವೇ ಸಂಬಂಧವೇ ಇಲ್ಲ ಅಂತ ಹೇಳಿದ ಮೇಲೆ ಎಂಥ ಮಾತು...?! ಮುಂದೆ ಬಾಳಬೇಕಾದವರು ನಾವೇ ಹೊರತು ಅವರಲ್ಲ..'' ಎನ್ನುತ್ತಾ ಕಾರಿನ ಬಳಿ ಕರೆದೊಯ್ದ. ರಾಜೀವ ಹೇಳಿದಂತೆ ಮಾಡಿ ತೋರಿಸುವವನೆಂದು ಪ್ರೀತಿಗೆ ಚೆನ್ನಾಗಿ ತಿಳಿದಿದೆ. ಅದರ ಅನುಭವ ಈ ಮೊದಲು ಸಾಕಷ್ಟು ಬಾರಿ ಆಗಿದೆ. ಈಗ 'ಸಂಬಂಧವೇ ಇಲ್ಲ' ಎಂದಾಗಲಂತೂ ಆಕಾಶ್ನನ್ನೇ ತೊರೆದು ಅಪ್ಪನ ಪಾದಗಳಲ್ಲಿ ಬಿದ್ದು 'ಕ್ಷಮಿಸು' ಎಂದು ಕೇಳಬೇಕು ಎನಿಸುತ್ತಿದೆ. ಇದಕ್ಕೂ ಮೊದಲು ಅದೆಷ್ಟು ಸಲ ಅಪ್ಪ ನನ್ನನ್ನು ಕ್ಷಮಿಸಿಲ್ಲ..! ಕ್ಷಣಗಾಲ ಕೋಪಿಸಿಕೊಂಡ ಅಪ್ಪ ನಂತರ ನಾನು ಕೇಳಿದ್ದನ್ನು ಕೊಡಿಸಿದ ದಿನಗಳು ಅವೆಷ್ಟೋ..! ಆದರೆ, ಇದು ಹುಡುಗಾಟದ ವಿಚಾರವಲ್ಲ. ಜೀವನದ ಪ್ರಶ್ನೆ. ತನಗೆ ಆಕಾಶ್ ಅದಾಗಲೇ ದೇವರ ಮುಂದೆ ತಾಳಿ ಕಟ್ಟಿ ಜೀವನ ಪೂರ್ತಿ ಜೊತೆಯಾಗಿರುವುದಾಗಿ ಭಾಷೆ ನೀಡಿದ್ದಾನೆ. ಮನಸ್ಸಿನ ಈ ಎಲ್ಲಾ ಇರುಸು ಮುರುಸುಗಳನ್ನ ಅರಗಿಸಿಕೊಳ್ಳಲಾಗದೆ ಶಿಲೆಯಂತೆ ಕಾರಿನ ಬಳಿಯೇ ನಿಂತಿದ್ದಳು.
ಈ ಎಲ್ಲ ಘಟನೆಗಳ ಹಿನ್ನೆಲೆ ಅರಿತಿದ್ದ ಕೆಲಸದಾಕೆ ನಿಂಗವ್ವ ಮಧ್ಯ ಪ್ರವೇಶಿಸಿ, ''ಯಜಮಾನ್ರೆ...! ಎಷ್ಟಾರ ಚಿಕ್ಕಮ್ಮನೋರು ನಿಮ್ಮ ಮಗಳೆ ತಾನೆ... ನಿಮ್ಮ ಹಾದಿನೆ ಹಿಡ್ದವ್ರೆ...!!'' ಎಂದಳು. ಅವಳಾಡಿದ ಕೊನೆಯ ವಾಕ್ಯ ಅದ್ಯಾಕೋ ರಾಜೀವನ ಮನಸ್ಸಿಗೆ ಸೂಜಿ ಚುಚ್ಚಿದ ಅನುಭವ ನೀಡಿತು. ತನ್ನ ಬಾಯ್ತಪ್ಪಿ ಬಂದ ಮಾತಿನಿಂದ ನಿಂಗವ್ವ ಕೂಡ ತಬ್ಬಿಬ್ಬಾದಳು.
'ಹೌದು...! ಸುಮಾರು ೨೨ ವರ್ಷಗಳ ಹಿಂದಿನ ಕಥೆ. ಇಂದಿಗೂ ಆ ದಿನಾಂಕ ಚೆನ್ನಾಗಿ ನೆನಪಿದೆ. ೧೯೮೪, ಜನವರಿ ೨೮. ಆಕೆ ಸುಲೋಚನ!. ಅವಳೊಂದಿಗೆ ತನ್ನ ಮದುವೆಯೆಂದು ಅಪ್ಪಾಜಿ ನಿರ್ಧರಿಸಿದ್ದರು. ಆದರೆ, ಆ ಮದುವೆ ಇಷ್ಟವಿಲ್ಲದ ನಾನು, ನನ್ನ ಪ್ರಿಯತಮೆ ಶ್ರೀಮತಿಯು ಜನವರಿ ೨೪ರ ರಾತ್ರಿ ರಾಮ ಮಂದಿರದಲ್ಲಿ ಹಾರ ಬದಲಾಯಿಸಿ 'ಮದುವೆ'ಯಾಗಿ ಬಂದಿರಲಿಲ್ಲವೇ...?! ಅಪ್ಪಾಜಿಯವರ ಕೈಯಿಂದ ಎಷ್ಟು ಹೊಡೆತ ಬೀಳುವುದೋ, ಅಥವಾ ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಅಮ್ಮನಿಗೆ ಏನಾದರು ಹೆಚ್ಚು ಕಡಿಮೆಯಾದೀತು ಎಂಬ ಭಯದಿಂದ ಈ ವಿಚಾರವನ್ನು ಮುರು ದಿನಗಳ ಕಾಲ ಅದೆಷ್ಟು ಕಷ್ಟ ಪಟ್ಟು ಮುಚ್ಚಿಟ್ಟಿದ್ದೆ...! ನಂತರ ಮದುವೆಯ ಮುನ್ನಾ ದಿನವಾದ ೨೭ರ ರಾತ್ರಿ ಇದೇ ನಿಂಗವ್ವ ನ ಕೈಯಲ್ಲಿ ಒಂದು ಚೀಟಿಯಿತ್ತು, ನನ್ನ ಪರವಾಗಿರುತ್ತಿದ್ದ ಅಣ್ಣನಿಗೆ ಕೊಡುವಂತೆ ಮತ್ತು ಆ ರೀತಿಯಲ್ಲಿ ಅಪ್ಪಾಜಿಗೆ ವಿಷಯ ತಿಳಿಸುವಂತೆ ಮಾಡಿರಲಿಲ್ಲವೇ..?! ಆ ನಂತರ ಸುಲೋಚನ ನ ಕಡೆಯವರು ನಿರೀಕ್ಷೆಗೂ ಮೀರಿ ಗಲಾಟೆ ಮಾಡಿದ್ದು, ನನಗೂ ಅಪ್ಪಾಜಿಗೂ ಛೀಮಾರಿ ಹಾಕಿದ್ದು... ಎಲ್ಲ ಈಗ ಇತಿಹಾಸ..! ಆ ಅನಿರೀಕ್ಷಿತ ಘಟನೆಯಿಂದ ಕುಪಿತಗೊಂಡ ಅಪ್ಪಾಜಿ ಇದೇ ರೀತಿ ನಮ್ಮನ್ನೂ ಮನೆಯಿಂದ ಹೊರಹಾಕಿದ್ದರು. ಆದರೆ, ಪರಿಪರಿಯಾಗಿ ಬೇಡಿಕೊಂಡಾಗ ನನ್ನನ್ನೂ, ಪ್ರಿಯತಮೆ ಶ್ರೀಮತಿಯನ್ನೂ ಮನೆಗೆ ಸೇರಿಸಿಕೊಂಡಿದ್ದರು. ಅದೊಂದು ಒಳ್ಳೆ ದಿನ, ಮುಹೂರ್ತ ನಿಶ್ಚಯ ಮಾಡಿ ಸೊಸೆಯನ್ನು ಮನೆ-ಮನ ತುಂಬಿಕೊಂಡಿದ್ದರು'. ಇದೆಲ್ಲವೂ ಒಂದೇ ಕ್ಷಣದಲ್ಲೇ ಮನಃಪಟಲದಲ್ಲಿ ಸುಳಿದು ಹೋಯಿತು.
'ನನ್ನ ಮತ್ತು ಶ್ರೀಮತಿಯ ಒಲವಿನ ಫಲವೇ ಈ ಮಗಳು. ಅದಕ್ಕೇ ಅವಳಿಗೆ 'ಪ್ರೀತಿ' ಎಂದು ನಾಮಕರಣ ಮಾಡಿದ್ದು. ಅದೂ ಅಪ್ಪಾಜಿಯವರ ಸಲಹೆಯಂತೆಯೇ..! ಆದರೆ, ದುರಾದೃಷ್ಟವಶಾತ್ ಪ್ರೀತಿ ಹದಿನೈದರ ಹರೆಯಕ್ಕೆ ಬಂದಾಗ ಅವಳ ತಾಯಿ ವಿಷ ಜಂತುವಿನ ಕಡಿತಕ್ಕೆ ಒಳಗಾಗಿ ನನ್ನಿಂದ ದೂರವಾದಳು'. ತನ್ನ ಬದುಕಿನ ವಿವಿಧ ಘಟನಾವಳಿಗಳನ್ನು ನೆನೆದು ರಾಜೀವನ ಕಣ್ಣಂಚು ಒದ್ದೆಯಾಗಿತ್ತು, ಮನಸ್ಸು ತಡೆಯಲಾರದಷ್ಟು ಭಾರವಾಗಿತ್ತು.
'ಇಲ್ಲ..! ತಾನು ದುಡುಕಿದೆ. ಆಡುವುದು ಒಂದು ಮಾಡುವುದು ಇನ್ನೊಂದು ಎಂದಾಗಬಾರದು. ಅವರನ್ನ ಈಗಲೇ ಮನೆಯೊಳಕ್ಕೆ ಸೇರಿಸಿಕೊಳ್ಳಬೇಕು. ಇಬ್ಬರನ್ನೂ ದೀರ್ಘ ಕಾಲ ಬಾಳುವಂತೆ ಆಶೀರ್ವದಿಸಬೇಕು. ಎಷ್ಟಾದರೂ ಅವಳು ನನ್ನ ಮಗಳು. ಅತ್ಯುತ್ತಮವಾದುದೆ ಅವಳ ಆಯ್ಕೆ ಆಗಿರುತ್ತದೆ.' ಎಂದುಕೊಂಡು, ''ಪ್ರೀತೀ...!'' ಎಂದು ಕೂಗುತ್ತಾ ಮನೆಯಿಂದ ಹೊರಗೋಡಿ ಬಂದ. ಆದರೆ, ಅವರ ಕಾರು ಅದಾಗಲೇ ಕಣ್ಣಳತೆಯಿಂದ ದೂರವಾಗಿತ್ತು. ಮಂಜಾದ ಕಣ್ಣನ್ನು ಒರೆಸಿಕೊಳ್ಳುತ್ತಾ, ಕಾರು ಹೋದ ದಿಕ್ಕಿನಲ್ಲೇ ತನ್ನೆರಡೂ ಕೈಗಳನ್ನು ಮೇಲೆತ್ತಿ ''ದೀರ್ಘ ಸುಮಂಗಲಿಯಾಗಿ ಬಾಳಮ್ಮಾ...!'' ಎಂದು ಮನದುಂಬಿ ರಾಜೀವ ಆಶೀರ್ವದಿಸಿದ.

Tuesday, June 23, 2009

ಒಂದಿಷ್ಟು ಫೋಟೋಗಳು...

ನನ್ನ ಕ್ಯಾಮರಾ ಕಣ್ಣಿಗೆ ಬಿದ್ದ ಇನ್ನೂ ಒಂದಷ್ಟು ಫೋಟೋಗಳನ್ನು ಇಲ್ಲಿ ಅಂಟಿಸಿದ್ದೇನೆ... ಹಾಗೆ ಸುಮ್ಮನೆ ಅಷ್ಟೆ...! ನೋಡಿ ಎಂಜಾಯ್ ಮಾಡಿ...!
ಹನಿ ಹನಿಯಾಗಿ ಜಿನುಗುತ್ತಿದೆ ಒಲವ ಧಾರೆ...!
ಊಟಿಯ ಒಂದು ಪರ್ವತ. ನೋಡ್ತಾ ಇದ್ರೆ ಹಾಗೆ ಇದ್ದು ಬಿಡುವಾಂತ ಕಾಣ್ತದೆ..!

ಇದೂ ಅಷ್ಟೆ... ಊಟಿಯಲ್ಲಿ ನನ್ನ ಕ್ಯಾಮೆರಾಕ್ಕೆ ಸಿಕ್ಕಿದ್ದು...!

ಚೆಂದದ ಹೂವು ಮಾರಾಯ್ರೆ...!

ಅದಕ್ಕೊಂದು ಪಾತರಗಿತ್ತಿ...!
ಮನಸ್ಸಿಗೆ ಖುಷಿ ಕೊಡುವ ಇಂತಹ ವಿಚಾರಗಳನ್ನು ಒಬ್ರೇ ಇಟ್ಟುಕೊಳ್ಳಬಾರದು ಅಂತ ಹೇಳೋದು ನನ್ನ ವಾದ. ಹಾಗಾಗಿ ಈ ಫೋಟೋಗಳನ್ನ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ... ಹೇಗೆ ಉಂಟು ಅಂತ ಹೇಳ್ತಿರಿ ಅಲ್ವ?

ವಿಂಟೇಜ್ ಅಲ್ಲ, ಇದು ಹೆರಿಟೇಜ್...!

ರೋಗಿಗಳ ನಾಡಿ ಮಿಡಿತ ಪರೀಕ್ಷೆ ಮಾಡುವ ಡಾಕ್ಟರ್ ಕೈಯಲ್ಲಿ ವಿಂಟೇಜ್ ಕಾರಿನ ಸ್ಟೇರಿಂಗ್!. ಹೌದು, ಬೆಂಗಳೂರಿನ ಡಾಕ್ಟರ್ ರವಿಪ್ರಕಾಶ್ ಅವರ ಆರೈಕೆಯಲ್ಲಿ ನೂರಕ್ಕೂ ಅಧಿಕ ಐತಿಹಾಸಿಕ ಕಾರುಗಳು ಮತ್ತು ೩೨ ಮೋಟಾರ್ ಬೈಕ್ಗಳು ಆರೋಗ್ಯ ಪೂರ್ಣವಾಗಿವೆ!. ಅಲ್ಲಿ ಇಲ್ಲಿ ಓಡಾಡ್ತ, ನಲಿದಡ್ತಾ ಇವೆ...!

ವಿಂಟೇಜ್ ಕಾರುಗಳನ್ನು ಸಂಗ್ರಹಿಸುವ ಅವರ ಹವ್ಯಾಸ ಆರಂಭ ಆದದ್ದೇ ಒಂದು ವಿಶೇಷ ರೀತಿಯಲ್ಲಿ. ೧೯೭೯ರಲ್ಲಿ ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ವಿಪ್ರಕಾಶ್ ಅವರಿಗೆ ಕಾರ್ ರೇಸ್ ನ ಹುಚ್ಚು. ಈ ಗೀಳು ಅವರನ್ನ ಮದರಾಸ್ಗೆ ಕರೆದೊಯ್ತು. ಅಲ್ಲಿ ಜನರಲ್ ಮಹಾದೇವ್ ಎನ್ನುವವರ ಸನ್ ಬೀಂ ಕಾರನ್ನ ತಮಗೆ ನೀಡುವಂತೆ ಕೇಳಿದರಂತೆ. ಜನರಲ್ ಇವರಿಗೆ 'ಆಗಲ್ಲ' ಅಂದರಂತೆ. ಅದಾದ ಬಳಿಕ ರವಿಪ್ರಕಾಶ್ ವಾಪಾಸ್ಸದರು. ಆದರೆ, ಕೆಲವು ತಿಂಗಳ ಬಳಿಕ ಜನರಲ್ ಮಹದೇವ್ ಅವರಿಂದ ಒಂದು ಪತ್ರ ಬಂತು. ಅದರಲ್ಲಿ, ಜನರಲ್ ಸ್ವರ್ಗಸ್ಥರಾಗಿದ್ದಾರೆಂದು, ತಮ್ಮ ಕಾರನ್ನು ರವಿಪ್ರಕಾಶ್ ಅವರಿಗೆ ಉಯಿಲು ಬರೆದಿದ್ದಾರೆಂದು ಮತ್ತು ಕಾರನ್ನು ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು!. ಹೀಗೆ ಆರಂಭವಾದ ಹವ್ಯಾಸ, ಇಂದು ಹೆಮ್ಮರವಾಗಿ ಬೆಳೆದಿದೆ. ೧೯೦೯ನೆ ಇಸವಿಯ ವೂಲ್ಸೆಯ್ ನಿಂದ ಮೊದಲಾಗಿ, ಇತ್ತೀಚಿನ ಲಕ್ಷಾಂತರ ರುಪಾಯಿ ಮೊತ್ತದ ಐಶಾರಾಮಿ ಕಾರುಗಳಿವೆ. ಉದಯಪುರದ ಮಹಾರಾಜರ ಜಾಗ್ವಾರ್ ಕಾರು, ಕಚ್ ಮಹಾರಾಜನ ಕಂದ್ಯುಲೆತ್, ಅಮೇರಿಕಾದಲ್ಲಿ ತಯಾರಾದ ದಿಯಮ್ಲರ್, ರಾಕರ್ ೮೮, ಫೋರ್ಡ್, ಮರ್ಸಿದಿಸ್ ಬೆನ್ಸ್, ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ...! ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಆಕರ್ಶಿಸೋದು ಅಂದರೆ, ಮಾಜಿ ಪ್ರಧಾನಿ ನೆಹರು ಅವರ ತಂದೆ ಮೋತಿಲಾಲ್ ಅವರನ್ನ ಹೊತ್ತೊಯ್ದ ಕಾರು. ಅದೇ ರೀತಿ ನಮಗೆ ಹೆಮ್ಮೆ ತರುವ ಮತ್ತೊಂದು ವಾಹನವೆಂದರೆ, ರಾಷ್ಟ್ರಕವಿ ಕುವೆಂಪು ಅವರ ಕಾರು.
ತಮ್ಮ ಈ ಹವ್ಯಾಸವನ್ನ ನಿರ್ವಹಿಸಲೆಂದೇ ರಾಜರಾಜೇಶ್ವರಿ ನಗರದ ೧೪ ಎಕರೆ ಫಾರ್ಮ್ ಹೌಸ್ನಲ್ಲಿ ೭ ಶೆಡ್ಗಳನ್ನ ನಿರ್ಮಿಸಿದ್ದಾರೆ. ಅಲ್ಲದೆ, ಈಗಲೂ ದೇಶದಾದ್ಯಂತ ತಮ್ಮ ಹುಡುಕಾಟ ಮುಂದುವರಿಸಿದ್ದಾರೆ. ಈ ಎಲ್ಲ ಕಾರುಗಳ ಮತ್ತು ಬೈಕ್ಗಳ ಆರೋಗ್ಯ ವಿಚಾರಣೆಗಾಗಿ ೧೫ ಮೆಕ್ಯಾನಿಕ್ಗಳ ತಂಡ ಕೆಲಸ ಮಾಡ್ತಿದೆ!. ಇದಕ್ಕೆಲ್ಲ ಲಕ್ಷಾಂತರ ರುಪಾಯಿ ಖರ್ಚು ಒದಗಿದರೂ, ಅದನ್ನು ಹೊರೆ ಎಂದು ಡಾ. ರವಿಪ್ರಕಾಶ್ ಯಾವತ್ತು ಭಾವಿಸಿದ್ದಿಲ್ಲ. ಈ ಬಗ್ಗೆ ಅವರು ಹೇಳೋದು ಇಷ್ಟು, ''ಇಂತಹ ಹವ್ಯಾಸಗಳೇ ಹೀಗೆ. ಖರ್ಚು ವೆಚ್ಚದ ಬಗ್ಗೆ ಇಲ್ಲಿ ಆಲೋಚನೆ ಮಾಡಲೇಬಾರದು. ಈ ಕಾರುಗಳು ಐತಿಹಾಸಿಕ ಮಹತ್ವ ಹೊಂದಿವೆ. ನಾಡಿನ ಇತಿಹಾಸವನ್ನ ನಾಳಿನ ಪೀಳಿಗೆಗೆ ಪರಿಚಯ ಮಾಡ್ಬೇಕು ಅಂತಾದ್ರೆ ಖರ್ಚು ಅನಿವಾರ್ಯ''. ಇವರ ಈ ಕಾರ್ಯಕ್ಕೆ ಪತ್ನಿ ಸಬೀನಾ, ಪುತ್ರಿಯರಾದ ರೂಪಾಲಿ ತ್ತು ಶಿಫಾಲಿ ಅವರಿಂದಲೂ ಸಂಪೂರ್ಣ ಬೆಂಬಲವಿದೆ.
ಮುಂದಿನ ಕೆಲವು ತಿಂಗಳಿನಲ್ಲಿ ತಮ್ಮ ಫಾರ್ಮ್ ಹೌಸ್ನ ನಾಲ್ಕು ಎಕರೆ ಭೂಮಿಯಲ್ಲಿ ವಿಂಟೇಜ್ ಕಾರ್ ಮ್ಯೂಸಿಯಂ ಸ್ಥಾಪಿಸುವ ಗುರಿಯನ್ನು ಡಾ.ರವಿ ಪ್ರಕಾಶ್ ಹೊಂದಿದ್ದಾರೆ. ಇದರಲ್ಲಿ ಸುಮಾರು ೪೫೦ ಕಾರುಗಳನ್ನು ಪ್ರದರ್ಶನಕ್ಕೆ ಇಡುವ ಯೋಜನೆ ಇದೆಯಂತೆ. ಅಲ್ಲದೆ, ಮ್ಯೂಸಿಯಂ ಮೇಲೆ ಹೆಲಿಪ್ಯಾಡ್ ನಿರ್ಮಿಸಿ, ರಸ್ತೆ ಅಪಘಾತದಲ್ಲಿ ಸಿಲುಕಿದವರಿಗೆ ಏರ್ ಅಂಬುಲೆನ್ಸ್ ನಲ್ಲಿ ಚಿಕಿತ್ಸೆ ಒದಗಿಸುವುದು ಇವರ ಮಹತ್ವಾಕಾಂಕ್ಷೆ ಗಳಲ್ಲಿ ಒಂದು.
ಒಟ್ಟಿನಲ್ಲಿ ದೇಶದ ಹಿಂದಿನ ಭವ್ಯ ಚರಿತ್ರೆಯನ್ನು ನವ ಪೀಳಿಗೆಗೆ ತಲುಪಿಸಲು ಶ್ರಮಿಸುತ್ತಿರುವ ಅವರ ಮಹತ್ಕಾರ್ಯಕ್ಕೆ ಜಯ ದೊರೆಯಲಿ ಎಂದು ಹಾರೈಸೋಣ ಅಲ್ವೇ...?

Tuesday, June 16, 2009

ಇದು ತಾಲಿಬಾನ್ ಗನ್ ಅಲ್ಲ ಮಾರಾಯ್ರೆ..!

ಕಾಡು ಹೋಯ್ತು ನಾಡು ಬಂತು..! ಕಾಡಿನಲ್ಲಿದ್ದ ಮಂಗ ತೋಟಕ್ಕೆ ಬಂತು...! ಆದ್ರೆ, ಅವುಗಳನ್ನ ಓಡಿಸಲಿಕ್ಕೆ ಮತ್ತೊಂದು ಟೆಕ್ನಿಕ್ ಸಿಕ್ತು..! ಹೌದು ಮಾರಾಯ್ರೆ... ಈ ಸರ್ತಿ ಊರಲ್ಲಿ ಮಂಗಗಳ ಉಪದ್ರ ಸ್ವಲ್ಪ ಜಾಸ್ತಿನೆ ಇದ್ಯಂತೆ. ತೋಟದಲ್ಲಿ ಬಾಳೆಗೊನೆ, ತೆಂಗಿನಕಾಯಿ ಸಿಕ್ಕೋದೇ ಕಷ್ಟ ಆಗಿದೆ ಅಂತ ಹೇಳ್ತಾರೆ. ಬಾಳೆಗೊನೆಯಲ್ಲಿ ಪೂಮ್ಬೆ (ಹೂವು) ಮಾತ್ರ ಉಂಟಂತೆ. ಬೊಂಡ (ಎಳನೀರು) ಎಲ್ಲ ಮರದ ಕೆಳಗೆ, ಒಬ್ಬನ ತೋಟದ ಅಡಿಕೆ ಇನ್ನೊಬ್ಬನ ತೋಟದಲ್ಲಿ ಉಂಟಂತೆ...! ಹೀಗೆ ಮಂಗಗಳ ಮೇಲೆ ತುಂಬ ಕಂಪ್ಲೇಂಟ್ ಉಂಟು.
ಅದಿಕ್ಕೆ, ಊರಿನವರು ಕಂಡು ಹಿಡ್ದ ಉಪಾಯ ಇದು. ತಾಲಿಬಾನ್ ಗನ್ನ ಹಾಗೆ ಕಾಣುವ ಇದು ಕೋತಿಗಳನ್ನ ಓಡಿಸ್ಲಿಕ್ಕೆ ಇರುವ ಉಪಕರಣ..! ಸುಮಾರು ಆರು ಫೀಟ್ ಉದ್ದದ, ಒಂದು ಇಂಚು ಅಗಲದ ಕಬ್ಬಿಣದ ಪೈಪನ್ನು ಮಧ್ಯಕ್ಕೆ ಕಟ್ಮಾಡ್ಬೇಕು. ನಂತ್ರ ಥ್ರೆಡ್ ಸೇರಿಸುವಲ್ಲಿ ಒಂದು ಸಣ್ಣ ರಂಧ್ರ ಮಾಡ್ಬೇಕು. ಆಮೇಲೆ, ಚಿತ್ರದಲ್ಲಿ ಇರುವಂತೆ ಒಂದು ಗರ್ನಾಲ್ (ದೊಡ್ಡ ಪಟಾಕಿ) ಇಟ್ಟು, ಅದಬತ್ತಿಯನ್ನು ರಂಧ್ರದ ಮೂಲಕ ಹೊರತಂದು ಥ್ರೆಡ್ ನ್ನು ಟೈಟ್ ಮಾಡ್ಬೇಕು. ಕೊನೆಗೆ ಗನ್ ನ ಮೇಲ್ಭಾಗಕ್ಕೆ ಹೊಯ್ಗೆ, ಮಣ್ಣು, ಸಣ್ಣ ಕಲ್ಲು, ಮುಳ್ಳು ಎಲ್ಲ ಮಿಕ್ಸ್ ಮಾಡಿ ತುಂಬಿಸ್ಬೇಕು. ಈಗ ಗನ್ ರೆಡಿ!. ಮತ್ತೇನಿಲ್ಲ ಮಾರಾಯ್ರೆ, ಮಂಗ ಇದ್ದಲ್ಲಿಗೆ ಗುರಿ ಇಡುದು ಗರ್ನಾಲ್ನ ಬತ್ತಿಗೆ ಬೆಂಕಿ ಕೊಡುದು ಅಷ್ಟೆ!. ದೊಡ್ಡ ಶಬ್ದವು ಬರ್ತದೆ, ಮಂಗನಿಗೆ ಬೇನೆಯೂ ಆಗ್ತದೆ. ಒಂದು ಖುಷಿ ಅಂದ್ರೆ ಇದರಿಂದಾಗಿ ಮಂಗ ಸಾಯುದಿಲ್ಲ. ಹೆದ್ರಿ ಕಿರ್ಚಿ ಓಡಿ ಹೋಗ್ತದೆ...! ಇದಿಕ್ಕೆ ಆಗುವ ಖರ್ಚು ಅಮ್ಮಮ್ಮಾ ಅಂದ್ರೆ ೮೦ ರುಪಾಯಿ ಅಂತೆ!.
ಅದೇನೇ ಇದ್ರೂ ಸಹ, ಒಮ್ಮೆ ಓಡಿ ಹೋದವು ಮತ್ತೆ ಬಂದೆ ಬರ್ತವೆ. ಆದ್ರೆ, ಪಾಪ ಅವಾದ್ರು ಏನು ಮಾಡ್ತವೆ..? ಅವುಗಳು ಇರಬೇಕಾದ ಕಾಡಿನಲ್ಲೂ ಮನುಷ್ಯ ತೋಟ ಮಾಡ್ತಾನೆ. ಅದಕ್ಕಾಗಿ ಮರ ಕಡಿತಾನೆ. ಇದ್ರಿಂದ ಅವು ನಾಡಿಗೆ ಬರ್ಲೆ ಬೇಕು ಅಲ್ವೇ. ಅವುಗಳದ್ದು ಜೀವ ಅಲ್ವ? ನೀವು ಏನು ಹೇಳ್ತಿರಿ?

Friday, June 12, 2009

ಸಂಚಾರವಾಣಿ ಮತ್ತು ನೀಲಿ ಹಲ್ಲು...!

ಬಾನಲ್ಲು ನೀನೆ
ಭುವಿಯಲ್ಲು ನೀನೆ...
ಎಲ್ಲೆಲ್ಲು ನೀನೆ,
ನನ್ನ (ಕೈ) ಯಲ್ಲೂ ನೀನೆ...!

ಯಾಕಪ್ಪಾ ಅಷ್ಟೊಳ್ಳೆ ಸಿನಿಮಾ ಹಾಡನ್ನ ರಿಮೇಕ್ ಮಾಡ್ತಾ ಇದ್ದಿ ಅಂಥ ಬೈಬೇಡಿ. ಅದಕ್ಕಾಗಿ ಕ್ಷಮೆ ಇರ್ಲಿ ಅಂತ ಕೆಳ್ಕೊಳ್ತೇನೆ. ಎಲ್ಲಾ ಕಡೆ ಮೊಬೈಲ್ನದ್ದೇ ಕಾರು ಬಾರು (ಕಾರಿನಲ್ಲೂ-ಬಾರಿನಲ್ಲು). ಅದರ ಕುರಿತಾಗಿ ಹೇಳೋ ಮೊದಲು ಇದೊಂದು ಮುನ್ನುಡಿ ಅಷ್ಟೆ!.

ಶಾಲೆಯೊಂದರಲ್ಲಿ ಮೇಷ್ಟ್ರು ಹುಡುಗನೋರ್ವನಿಗೆ, "ಜೀವನದ ಅವಿಭಾಜ್ಯ ಅಂಗಗಳು ಯಾವ್ಯಾವುವು?" ಅಂತ ಕೇಳಿದ್ರು. (ತುಂಬ ಬೇಸಿಕ್ ಪ್ರಶ್ನೆ ಅಲ್ವೇನ್ರಿ?!). ಶಿಷ್ಯ, " ಸರ್... ಕಣ್ಣು, ಕಿವಿ, ಮುಗು, ನಾಲಗೆ..." ಅಂತೆಲ್ಲ ಹೇಳಿ "ಮೊಬೈಲ್ ಫೋನ್ ಸಾರ್!" ಅಂದ. ಅವಕ್ಕಾದ ಮೇಷ್ಟ್ರು, "ಮೊಬೈಲಾ.. ಅದ್ರ ಬಗ್ಗೆ ನಾನು ಎಲ್ಲೂ ಹೇಳೇ ಇಲ್ವಲ್ಲೋ" ಅಂದರು. ಬುದ್ಧಿವಂತ ಶಿಷ್ಯ, "ಅದಿಲ್ದೆ ನಮ್ಮ ದಿನಚರಿನೆ ಸಾಗಲ್ಲಾ ಸಾರ್!" ಎಂದ. ಎಲಾ ಹುಡುಗ, ಸ್ಕೂಲ್ಗೆ ಬಾರೋ ದಿನಗಳಲ್ಲೇ ಮೊಬೈಲ್ ವ್ಯಾಮೊಹನಾ! ಅಂದುಕೊಂಡು ಗುರುಗಳು, " ಹೋಗ್ಲಿ ಬಿಡಪ್ಪಾ, ನಿನ್ನ ದಿನಚರಿನಾದ್ರೂ ಹೇಳು" ಅಂದರು. "ಅಯ್ಯೋ ಸೊ ಸಿಂಪಲ್ ಸಾರ್..!" ಎಂದ ಶಿಷ್ಯೋತ್ತಮ, "ಬೆಳಿಗ್ಗೆ ೫.೩೦ಕ್ಕೆ ಮೊಬೈಲ್ನಲ್ಲಿ ಅಲಾರಂ ಆದ ತಕ್ಷಣ ಏಳ್ತೀನಿ..." ಖುಷಿಯಿಂದ ಕಣ್ಣರಳಿಸಿದ ಗುರುವರ್ಯ, "ಓ, ವೆರಿಗುಡ್! ಎವೆರಿವನ್ ಶುಡ್ ಫಾಲ್ಲೋವ್ ಹಿಂ! ಹುಂ ಆಮೇಲೆ?" ಎಂದರು ಹೆಮ್ಮೆಯಿಂದ. ಶಿಷ್ಯ, "ಸಾರ್, ಆಮೇಲೆ ನೇಚರ್ ಕಾಲ್ ಗೆ ಉತ್ತರಿಸಿ..... ಬೆಡ್ ಮೇಲೆ ಕೂರ್ತೀನಿ''. ಕುತೂಹಲಗೊಂಡ ಮೇಷ್ಟ್ರು, ''ಇಷ್ಟ ದೇವರ ಪ್ರಾರ್ಥನೆ ಮಾಡ್ತಿ ಅಂತ ಕಾಣುತ್ತೆ!" ಎಂದಾಗ ಈ ಶಿಷ್ಯೋತ್ತಮನ ಗೆಳೆಯರ ಬಳಗದಿಂದ ಜೋರಾಗಿ ನಗು ಕೇಳಿ ಬಂತು. ಮುಂದುವರಿದ ಶಿಷ್ಯನೆ ಹೇಳಿದ, "ಇಲ್ಲ ಸಾರ್, ಫ್ರೆಂಡ್ಸ್ಗೆ ಗುಡ್ಮಾರ್ನಿಂಗ್ ಎಸ್ಸೆಮ್ಮೆಸ್ ಕಳಿಸ್ತೀನಿ! ಆಮೇಲೆ, ಆಮೇಲೆ, (ತಲೆ ತಗ್ಗಿಸಿ) ಮೊಬೈಲ್ನ ಸೈಲೆಂಟ್ ಮೋಡ್ಗೆ ಹಾಕಿ, ಮತ್ತೆ ಮಲಗಿ ಬಿಡ್ತೀನಿ ಸಾರ್..!" ಎಂದು ಹೇಳಿ ಕೂತು ಬಿಟ್ಟ. ಕಂಗಾಲಾದ ಮೇಷ್ಟ್ರು, "ಅಯ್ಯೋ ಮೂರ್ಖ, ನಾನೇನೋ ಅಂದ್ಕೊಂಡಿದ್ರೆ... " ಎನ್ನುತ್ತಿರುವಾಗಲೇ ಶಿಷ್ಯ ಮತ್ತೆ ಮಾತಾಡಿದ. " ಸಾರ್, ಬೆಳಿಗ್ಗೆ ಮಾತ್ರ ಹೀಗೆ ಮಾಡೋದು. ರಾತ್ರಿ ಎಲ್ಲ ಓದಿಯೇ ಮಲಗೋದು. ಎನಿಲ್ಲಾನ್ದ್ರು ಹನ್ನೆರಡು ಗಂಟೆ ಆಗಿಯೇ ಆಗುತ್ತೆ" ಎಂದ ಫುಲ್ ಕಾನ್ಫಿಡೆನ್ಸ್ ನಿಂದ! ಸ್ವಲ್ಪ ನಿರಾಳ ಎನಿಸಿದಾಗ ಗುರುಗಳು ಖುಷಿಯಾದರು.

"ಆಗ್ಲಪ್ಪಾ.. ರಾತ್ರಿ ದಿನದ ಪಾಠ ಓದಿಯೇ ಮಲಗೋದು ತಾನೆ...? ಅದ್ಕೆ ಪ್ರತಿ ಪರಿಕ್ಷೆನಲ್ಲು ನೀನೆ ಫಸ್ಟ್ ಬರೋದು..." ಎಂದರು. ಅದೇ ಸಮಯಕ್ಕೆ ಸರಿಯಾಗಿ ಈ ಶಿಷ್ಯನ ಪಕ್ಕದ್ಮನೆ ಕ್ಲಾಸ್ಮೇಟ್ ಬಾಂಬ್ ಸಿಡಿಸಿಯೇ ಬಿಟ್ಟ. "ಹೌದು ಸಾರ್..! ಅವನು ದಿನಂಪ್ರತಿ ಓದಿಯೇ ಮಲಗೋದು. ಯಾಕೆಂದ್ರೆ ಕಾಲೇಜ್ ಓದ್ತಿರೋ ಅವ್ರ ಅಕ್ಕ ಮನೆಗೆ ಬರೋದೇ ಲೇಟಾಗಿ. ಅವ್ರು ಅವ್ರ ಬಾಯ್ಫ್ರೆಂಡ್ ಜೊತೆ ಹರಟಿದ ನಂತರ ಇವ್ನಿಗೆ ಮೊಬೈಲ್ ಸಿಗೋದು. ಅಷ್ಟರಲ್ಲಿ ಹನ್ನೆರಡು ಗಂಟೆ ಆಗಿರುತ್ತೆ! ಆಮೇಲೆ ಪಾಪ ಕದ್ದು ಮೆಸೇಜ್ ಓದಬೇಕು!!" ಎಂದಾಗ, ಗುರುವರ್ಯ ಸುಸ್ತು!. ಮತ್ತೊಬ್ಬ ಶಿಷ್ಯ, "ಸಾರ್, ಎಕ್ಸಾಂ ಹಾಲ್ನಲ್ಲಿ ಚೀಟಿ ತರೋದಿಕ್ಕೆ ಬಿಟ್ರೆ ನಾನೂ ಕ್ಲಾಸ್ ಗೆ ಏನು, ಸ್ಟೇಟ್ ಗೆ ಬೇಕಾದರೂ ಫಸ್ಟ್ ಬರ್ತೇನೆ!!" ಎಂದ. ಈ ಶಿಷ್ಯನ ದಿನಚರಿಯ ಸಹವಾಸವೇ ಬೇಡ ಅಂದುಕೊಂಡ ಗುರುಗಳು ಸಾವರಿಸಿಕೊಂಡು ದಿನದ ತರಗತಿ ಕೊನೆ ಮಾಡಿದ್ರು!.

ಅದೊಂದು ದಿನ ನಮ್ಮ ಘನ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಊರಿಗೆ ಹೊರಟಿದ್ದೆ. ಕಿಕ್ಕಿರಿದು ತುಂಬಿದ್ದ ಬಸ್ಸಿಗೆ ಅದ್ಹೇಗೋ ಕಾಲಿರಿಸಿದ್ದಾಯ್ತು. ಯಾಣವನ್ನು ಮುಂಗಡ ಕಾದಿರಿಸಿದ್ದೆ. ತುಂಬಿದ ಬಸ್ನಲ್ಲಿ ಎಲ್ಲರನ್ನು ತಳ್ಳುತ್ತಾ ನನ್ನ ಸೀಟಿನ ಬಳಿ ಬಂದೆ. ನೋಡಿದ್ರೆ ನನ್ನ ಸೀಟಿನಲ್ಲಿ ಅದಾಗಲೇ ಒಬ್ಬ ದಡೂತಿ ಆಸಾಮಿ ಕುಕ್ಕರಿಸಿದ್ದ. ಅವನನ್ನ ಉದ್ದೇಶಿಸಿ, "ಹಲೋ ಬ್ರದರ್, ಇದು ನನ್ನ ಸೀಟು. ದಯವಿಟ್ಟು ಬಿಟ್ಟುಕೊಡಿ" ಎಂದೆ ಸೌಜನ್ಯ ಪೂರ್ವಕವಾಗಿ. ಅವನೂ ನಗುತ್ತಾ, "ಖಂಡಿತ ಬನ್ನಿ, ಯು ಆರ ಆಲ್ವೇಸ್ ವೆಲ್ಕಂ!" ಎಂದ ಕೈ ಕರಣ ಮಾಡುತ್ತಾ. ಅಬ್ಬ ಹೆಚ್ಚು ಚರ್ಚೆ ಇಲ್ದೆ ಸೀಟು ಸಿಕ್ತಲ್ಲ ಅಂತ ಖುಷಿಯಾದೆ. ಇನ್ನೇನು ಸೀಟ್ನಲ್ಲಿ ಕೂರಬೇಕು ಅನ್ನುವಷ್ಟರಲ್ಲಿ ಇಡೀ ಬಸ್ಸೇ ನಡುಗುವಂತೆ, "ಏನಯ್ಯಾ.. ಸ್ವಲ್ಪನಾದ್ರೂ ತಾಳ್ಮೆ ಇಲ್ವೆ? ನಿನ್ನ ಸೀಟು ನಿನಗೆ ಆಯ್ತು. ನಾನೇನು ಹೊತ್ಕೊಂಡು ಹೋಗೋದಿಲ್ಲ!." ಅವನ ಕಣ್ಣು ಕೆಂಡದ ಹಾಗಿತ್ತು!. ನನ್ನ ಗಂಟಲ ಪಸೆ ಆರಿ ಹೋದರೂ ಧೈರ್ಯ ಮಾಡಿ, "ಏನ್ರಿ, ನಾನು ರಿಸರ್ವ್ ಮಾಡಿದ ಸೀಟು ಇದು. ಹದಿನೈದು ರುಪಾಯಿ ಹೆಚ್ಚು ನೀಡಿದೇನೆ. ಅದೂ ಅಲ್ದೆ ನೀವೇ ತಾನೆ ಅಂದವರು, ಆಲ್ವೇಸ್ ವೆಲ್ಕಂ ಅಂತ'' ಎನ್ನುತ್ತಾ ದಬಾಯಿಸಿದೆ. ಅದಕ್ಕಾತ, "ಇರಬಹುದು, ನಿನ್ ಮಾತಿಗೆ ಆಲ್ವೇಸ್ ವೆಲ್ಕಂ ಬೇರೆ ಕೇಡು! ನೀನೇನು ನನ್ನ ಲವರ್ ಬ್ರದರಾ?!" ಎನ್ನುತ್ತಾ ಎಡಗಿವಿಯಿಂದ ತನ್ನ ಮೊಬೈಲ್ನ ಹೆಡ್ ಫೋನ್ ತೆಗೆದ!. ಆಗ್ಲೇ ಸ್ವಾಮಿ ನಂಗೆ ತಿಳಿದದ್ದು, ಆತ ಆಲ್ವೇಸ್ ವೆಲ್ಕಂ ನ ಪೂರ್ಣ ಕುಂಭ ಸ್ವಾಗತ ಕೋರಿದ್ದು ನನಗಲ್ಲ, ಬದಲಿಗೆ ತನ್ನ ಗರ್ಲ್ ಫ್ರೆಂಡ್ ಬ್ರದರ್ಗೆ ಅಂತ!.

ಬಸ್ ಜೋರಾಗಿ ಸಾಗಿ, ಹಾಸನಕ್ಕೆ ತಲುಪಿತ್ತು. ನಿಲ್ದಾಣದಲ್ಲಿ ಒಂದಷ್ಟು ಜನರನ್ನ 'ಸೆಂಟ್ ಬಾಕ್ಸ್' ಗೆ ಕಳುಹಿಸಿ, ಇನ್ನೊಂದಷ್ಟು ಜನರನ್ನು 'ಇನ್ ಬಾಕ್ಸ್' ಗೆ ಕರೆ ತಂತು. ಸಕಲೇಶಪುರದ ಪಶ್ಚಿಮ ಘಟ್ಟ ಸಾಲಿನ ಸೌಂದರ್ಯವನ್ನ ಕಣ್ಣಲ್ಲಿ ಸೆರೆ ಹಿಡಿಯುತ್ತ ಕೂತಿದ್ದೆ. ನನ್ನ ಪಕ್ಕದಲ್ಲಿ ಕೂತ ಸಹಪ್ರಯಾಣಿಕ ಎಂತಹ ಪ್ರಾಣಿ ಎಂಬುದನ್ನು ತಿಳಿಯುವ ಗೋಜಿಗೆ ನಾನು ಹೋಗಿರಲಿಲ್ಲ!. ಘಾಟಿ ಇಳಿಯುತ್ತ ಇದ್ದಾಗ, ಅದೆಲ್ಲಿಂದಲೋ ಬಂದ "ಅಯ್ಯಾ..!" ಎಂಬ ದನಿಗೆ ನನ್ನ ಕತ್ತು ಹೊರಳಿತು. ನನ್ನ ಸಹ ಪ್ರಯಾಣಿಕ ನನ್ನನ್ನೇ ಕರೆದದ್ದು!. "ಹೇಳಿ.." ಎಂದೆ. "ಏನಿಲ್ಲಾ, ತಮ್ಮ ಪರಿಚಯ..." ಎಂದ. ಅಗ್ಲಪ್ಪ ಟೈಮ್ ಪಾಸ್ಗೆ ಒಬ್ಬ ಸಿಕ್ಕಿದ ಅಂದುಕೊಂಡು ವಿಸಿಟಿಂಗ್ ಕಾರ್ಡ್ ಕೊಟ್ಟೆ. "ನೀವು..." ಎಂದೆ. ಬೆರಳು ತೋರಿಸಿದರೆ ಶರೀರವನ್ನೇ ನುಂಗುವ ರೀತಿಯಲ್ಲಿ ಆತ, ತನ್ನ ಹೆಸರು, ಕುಲ, ಗೋತ್ರ, ಪ್ರವರ... ಇನ್ನು ಏನೇನೋ ಬಿಚ್ಚಿಟ್ಟ!. ಸುಸ್ತಾಗಿ ಹೋದೆ.! ಒಟ್ಟಿನಲ್ಲಿ ಆತನೊಬ್ಬ 'ಕೊರೆಯೋಗ್ರಾಫರ್' ಅಂತ ತಿಳಿಯಿತು. (ಕೊರಿಯೋ ಗ್ರಾಫರ್ ಅಲ್ಲ!). ಜಾಸ್ತಿ ತಲೆ ತಿನ್ನೋರಿಗೆ ನಾನು ಕೊರೆಯೋಗ್ರಾಫರ್ ಅಂತಾನೆ ಕರೆಯೋದು!. ಕೊನೆಗೆ ತಿಳಿದ ವಿಚಾರ ಅಂದ್ರೆ ಆತ ಒಬ್ಬ ಕನ್ನಡ ಪಂಡಿತ ಅಂತೆ. "ಮಾತಿನ ಧಾಟಿಯಲ್ಲೇ ತಿಳಿಯಿತು. ನೀವೇ ಅರ್ಹ ವ್ಯಕ್ತಿ" ಎಂದೆ. ಖುಷಿಯಾದ ಪುಣ್ಯಾತ್ಮ ಮತ್ತೆ ಕೊರೆತ ಶುರುವಿಟ್ಟ.!
ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಹೇಗೆ ಸೂಕ್ಷ್ಮ ತಿರುವುಗಳು ಜಾಸ್ತಿಯೋ, ಅದೇ ರೀತಿ ಆತನೂ, ಒಂದು ವಿಚಾರದಿಂದ ಮತ್ತೊಂದಕ್ಕೆ ಸುತ್ತುತ್ತಿದ್ದ. ಒಮ್ಮೆಲೇ, "ವಾಣಿ.." ಎಂದ. ಬ್ಯಾಚುಲರ್ ಹುಡುಗನಿಗೆ ಸುಂದರ ಹುಡುಗಿ ತೋರಿಸ್ತಾನೋ ಏನೋ ಅಂದ್ಕೊಂಡು, "ಎಲ್ಲಿ?" ಅಂದೇ. "ನಿಮ್ಮ ಕೈಯಲ್ಲಿ!" ಎಂದ. ದಂಗಾಗಿ ನೋಡಿದ್ರೆ, ನನ್ನ ಮೊಬೈಲ್ ಫೋನ್ ಪಕ್ಕಾ ಕನ್ನಡಕ್ಕೆ ಅನುವಾದವಾಗಿದೆ!. ಕೊಪಿಸ್ಕೊಂಡೆ. ಆದ್ರೆ ಸುಮ್ನಾದೆ.
ಇನ್ನೇನು ಕೊನೆಯ ಬಸ್ ಸ್ಟಾಪ್ಗೆ ಸುಮಾರು ೫ ಕಿ.ಮಿ. ಇರಬಹುದು. ಆದರೂ ಮಾತು ನಿಲ್ಲಿಸಲಿಲ್ಲ!. "ನಿಮ್ಮ ಸಂಚಾರ ವಾಣಿಯಲ್ಲಿ ನೀಲಿ ಹಲ್ಲು ಇದೆಯೇ?" ಎಂಬ ಪ್ರಶ್ನೆ ಹಾರಿ ಬಂತು. ಇದೇನಿದು ಹೊಸ ಆವಿಷ್ಕಾರ, ನಾನು ಕಂಡು ಕೇಳಿ ತಿಳಿಯದ್ದು?, ಎಂದುಕೊಳ್ಳುತ್ತಿರುವಾಗಲೇ ಮಹಾನ್ ಸಂಶೋಧಕನಂತೆ blue tooth ತೋರಿಸಿದ್ದ!. ಅಯ್ಯೋ... ಇದೇನಪ್ಪ ನನ್ನ ಗ್ರಹಚಾರ ಎಂದುಕೊಂಡರೂ ಆತನ ಭಾಷಾಭಿಮಾನಕ್ಕೆ ತಲೆದೂಗಿದೆ. ಜೈ ಕನ್ನಡಾಂಬೆ ಎಂದುಕೊಳ್ಳುತ್ತಾ, 'ಕಿಟಕಿ ಮುಖಿಯಾದೆ!'.

ಇದೆ ಗುಂಗಿನಲ್ಲಿ ಮನೆ ಸೇರಿದ್ದಾಯ್ತು. ನಾನು ಬಂದ ವಿಚಾರ ತಿಳಿದು ಹಳೆಯ ಆತ್ಮೀಯ ಗೆಳೆಯ ಮನೆಗೆ ಬಂದ. ಆತನ ಮೊಬೈಲ್ನಲ್ಲಿ infrared ಮಾತ್ರ ಇತ್ತು. ಎಲ್ಲರಿಗೂ ತಿಳಿದಿರುವಂತೆ ಈ ತಂತ್ರಜ್ಞಾನ ದ ಮೂಲಕ ಮಾಹಿತಿ ರವಾನೆ ಆಗಬೇಕಾದರೆ ಎರಡು ಮೊಬೈಲೂ ಅತಿ ಹತ್ತಿರದಲ್ಲಿ ಸಂಪರ್ಕಕ್ಕೆ ಬರಬೇಕು. ಇದನ್ನ ನೋಡಿದ ನನ್ನ ಅಣ್ಣನ ಮಗ ಬಳಿ ಬಂದ. ಕುತೂಹಲದಿಂದ ನನ್ನ ಮುಖಕ್ಕೂ ಮೊಬೈಲ್ಲನ್ನೂ ಸ್ವಲ್ಪ ಹೊತ್ತು ದಿಟ್ಟಿಸಿ ಹೇಳಿದ, "ಚಿಕ್ಕಪ್ಪ, ನಿನಗೆ ಮಾತ್ರ ಅಲ್ಲಾ, ಮೊಬೈಲ್ಗೂ ಗರ್ಲ್ ಫ್ರೆಂಡ್ ಬೇಕಾಗುತ್ತಲ್ಲಾ, ನೋಡು ಎಷ್ಟು ಡೀಪ್ ಆಗಿ ಲವ್ ಮಾಡ್ತಿವೆ..!!!" ಎಂದಾಗ ನಾವು ಮೊಬೈಲ್ ಬೇರ್ಪಡಿಸದೆ ವಿಧಿಯಿರಲಿಲ್ಲ. ಅಳುವುದೋ ನಗುವುದೋ ತಿಳಿಯದೆ ಅಲ್ಲಿಂದ ಕಾಲ್ಕಿತ್ತೆವು!.

Thursday, June 11, 2009

ನನ್ನ ಕ್ಯಾಮಾರ ಕಣ್ಣು

ಫೋಟೋಗ್ರಫಿ ಹವ್ಯಾಸ ನನಗು ಉಂಟು ಮಾರಾಯ್ರೆ. ನನ್ನ ಪುಟ್ಟ ಡಿಜಿಟಲ್ ಕ್ಯಾಮೆರಾದಲ್ಲಿ ತೆಗ್ದ ಕೆಲವು ಫೋಟೋಗಳನ್ನ ಇಲ್ಲಿ ಹಾಕಿದ್ದೇನೆ. ಅವು ಅಷ್ಟೊಂದು ಪ್ರೊಫೆಶನಲ್ ಇರಲಿಕ್ಕಿಲ್ಲ. ಆದ್ರೆ ಚೆಂದ ಉಂಟು ಅಂತ ಅಂದುಕೊಂಡಿದ್ದೇನೆ. ಹೇಗೆ ಉಂಟು ಅಂತ ನೋಡಿ ಹೇಳಿ ಆಯ್ತಾ...
ಇದು ನನ್ನ ಊರಲ್ಲಿ ತೆಗೆದ ಫೋಟೋ. ಅಲ್ಲಿ ಚಳಿಗಾಲದಲ್ಲಿ ಬಾಲರವಿ ಮತ್ತು ಇಬ್ಬನಿ ಒಂಥರಾ ಟೀನೇಜ್ ಹುಡುಗ-ಹುಡುಗಿ ಇದ್ದ ಹಾಗೆಂತ ನನ್ನ ಅಭಿಪ್ರಾಯ!. ಅವರಿಬ್ರು ಹೇಳೋದು, "ವಿ ಆರ ಜಸ್ಟ್ ಫ್ರೆಂಡ್ಸ್" ಅಂತ. ಆದ್ರೆ ನಾವು ನಮ್ಬ್ಬೆಕಲ್ಲ! ಒಬ್ಬನ್ನನ್ನ ಬಿಟ್ಟು ಮತ್ತೊಬ್ಬ ಇರ್ಲಿಕ್ಕೆ ಇಲ್ಲ...! ಒಬ್ಬರ ಪ್ರೀತಿಯಲ್ಲಿ ಮತ್ತೊಬ್ಬ ಕರಗಿ ಹೋಗಿಯೇ ಹೋಗ್ತಾನೆ...!
ಓಯ್ ಮಾರಾಯ್ರೆ..! ಇದು ಇಬ್ಬನಿ ಮತ್ತು ಬಾಲರವಿ ಮದುವೆಗೆ ಹಾಕಿದ ಪೆಂಡಾಲ್ ಅಲ್ಲ. ಮನೆ ಅಂಗಳದಲ್ಲಿ ಬೆಳಿಗ್ಗೆ ಜೇಡ ಬಲೆ ಕಟ್ಟಿದ್ದು! ಈ ಸುಂದರಿ ನನ್ನ ಫೋಟೋ ತೆಗೆಯುವವರೆಗೆ ಹಾರೋದೆ ಇಲ್ಲ ಅಂತ ಗಟ್ಟಿಯಾಗಿ ಕೂತಿದ್ಲು...!
ಇದು ಶಿವರಾಮ ಕಾರಂತರ ಚೋಮನ ದುಡಿಯಲ್ಲಿ ಬರುವ ಬಂಟಮಲೆ ಕಾಡು. ಒಂದು ಟೈಮಲ್ಲಿ ದಟ್ಟವಾಗಿತ್ತು. ಈಗ ಹೊರಗಿಂದ ಮಾತ್ರ ಹೀಗೆ ಕಾಣ್ತದೆ. ಒಳಗಿಂದ ಎಲ್ಲ ಬೋಳು. ಜನ ಬಿಡಬೇಕಲ್ಲ...
ಒಂದು ಸಣ್ಣ ತೋಡು. ಚಿಕ್ಕವನಾಗಿದ್ದಾಗ ಇಲ್ಲೇ ನಾನು ಮತ್ತೆ ನನ್ನ ಫ್ರೆಂಡ್ಸ್ 'ಈಜಾಡ್ಲಿಕ್ಕೆ' ಬರ್ತಿದ್ದದ್ದು. ನಮ್ಮಂಥ ಬಾಲ್ಯ ಈಗಿನ ಹಳ್ಳಿ ಹುಡುಗರಿಗೂ ಇಲ್ಲ ಬಿಡಿ...!

ನನ್ನದೂ ಒಂದು ಬ್ಲಾಗ್ ಇರ್ಲಿ ಅಂತ...!

ನಮಸ್ಕಾರ...!

ಮತ್ತೆ ಬಂದಿದ್ದೇನೆ... ಇದು ಬ್ಲಾಗ್ ಯುಗ ಅಲ್ವೇ? ಅದ್ಕೆ ನನ್ನದೂ ಒಂದು ಇರ್ಲಿ ಅಂತ...! ಅದ್ಯಾಕೋ ಗೊತ್ತಿಲ್ಲ, ಮೊದ್ಲು ಮಾಡಿದ್ದ ಬ್ಲಾಗ್ನ ವಾಸ್ತು ಸರಿಯಾಗಿರ್ಲಿಲ್ಲ. ಹಾಗೆ, ಪುನಹ ಮತ್ತೊಂದು ಕಟ್ಟಿದ್ದೇನೆ. ಆಗಾಗ ನನ್ನಿಂದಾದ ಬರಹಗಳನ್ನ ಅಂಟಿಸ್ತಾ ಇರ್ತೇನೆ. ಅದೂ ಕಾಲ ಕಾಲಕ್ಕೆ ಸರಿಯಾಗಿ ಅಲ್ದೆ ಹೋದ್ರು, ಪುರುಸೊತ್ತು ಆದಾಗಂತು ಅನ್ನೋದು ಖಂಡಿತ...! ಮತ್ತೊಂದು ವಿಚಾರ. ನನ್ನ ಬ್ಲಾಗ್ನಲ್ಲಿ ಇಂಥದ್ದೇ ಅಂತ ಇರ್ಲಿಕ್ಕಿಲ್ಲ. ಕೆಲವು ಕಟ್ಟುಪಾಡುಗಳು ನಂಗೆ ಜೀರ್ಣ ಆಗೋದಿಲ್ಲ! ಆದ್ರೂ ತಾವು ಈ ಪ್ಲೇಸ್ ನೋಡ್ತಾ ಇರ್ತೀರಿ ಅನ್ನೋ ನಂಬಿಕೆ ನನಗಿದೆ. ಹಾಂ... ಅದೇ ರೀತಿ ಟೈಮ್ ಟೈಮ್ಗೆ ಕಮೆಂಟೂ, ಸಜೆಷನ್ನು ನೀಡ್ತಾ ಇರ್ತೀರಿ ತಾನೆ...?



ನಿಮ್ಮ
ಪ್ರೀತಿಯ ಸದಾ...